![]() |
| ಪ್ರೊ. ಕಾಳೇಗೌಡ ನಾಗವಾರ |
ಕನ್ನಡ ಪರಂಪರೆ ಮತ್ತು ವೈಚಾರಿಕತೆ
•ಪ್ರೊ. ಕಾಳೇಗೌಡ ನಾಗವಾರ
ಭಾರತ ಸ್ವಾತಂತ್ರೋತ್ಸವದ ಆಚೀಚಿನ ಒಂದು ಕಾಮನ ಹುಣ್ಣಿಮೆಯಂದು ಹುಟ್ಟಿದೆನೆಂದು ನನ್ನ ತಾಯಿ ಹೇಳುತ್ತಿದ್ದರು. ಹೊಸತಾಗಿ ಅಕ್ಷರ ಕಲಿತ ಹಳ್ಳಿಯ ಹುಡುಗನಾದ ನನಗೆ ನನ್ನ ಹದಿಹರೆಯದ ದಿನಗಳಿಂದಲೇ ಕತೆ, ಕವನ, ಲೇಖನಗಳ ಬರವಣಿಗೆ ಮತ್ತು ಪ್ರವಾಸವನ್ನೂ ಒಳಗೊಂಡ ವಿವಿಧ ಚಟುವಟಿಕೆಗಳಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಹುಚ್ಚು ಹೇಗೋ ಅಂಟಿಕೊಂಡಿತ್ತು. ಇದರ ಜೊತೆಗೆ ಶಾಲಾ ದಿನಗಳಲ್ಲಿ ಹೆಚ್ಚಿನ ಅಕ್ಕರೆಯಿಂದ ಓದಿದ್ದ ಬುದ್ಧ, ಬಸವ, ಅಕ್ಕ, ಗಾಂದಿs, ಪಂಪ, ಕುಮಾರವ್ಯಾಸ, ಹರಿಹರ, ಕುವೆಂಪು ಮುಂತಾದ ಚಿಂತಕರ ಬರಹಗಳು ನನ್ನೊಳಗೆ ವೈಚಾರಿಕ ಪ್ರe್ಞÉಯ ಬೀಜಗಳನ್ನು ಬಿತ್ತಿರಬಹುದು. ಈ ನಿಟ್ಟಿನಲ್ಲೇ ಸಾಗಿ ದೈವ - ಧರ್ಮದ ಹೆಸರಿನಲ್ಲಿ ಮುಗ್ಧ ಜನತೆಯ ಮೇಲೆಸಾಗುವ ಮೌಢ್ಯದ ವಿಕಾರಗಳನ್ನು ನನ್ನ ಕೈಲಾದಮಟ್ಟಿಗೆ ಪ್ರತಿಭಟಿಸುತ್ತಾ ಬೆಳೆದುಬಂದವನು ನಾನು. ಶಾಲೆ, ಕಾಲೇಜು, ಆಸ್ಪತ್ರೆ ಕೆರೆ - ಕಟ್ಟೆ, ತೋಪು, ರಸ್ತೆ, ವಿದ್ಯಾರ್ಥಿನಿಲಯಗಳಂಥ ನಿಜವಾದ ಜನೋಪಯೋಗಿ ಕಾರ್ಯಗಳಿಗೆ, ಸರ್ಕಾರದ ಹಣ ವಿನಿಯೋಗವಾಗಬೇಕೆಂದು ನಾವೆಲ್ಲ ಗೆಳೆಯರು ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ಕೆಂಗಲ್ ಹನುಮಂತಯ್ಯನವರು ಪುನರುಜ್ಜೀವನಗೊಳಿಸಿದ ದೇವಾಲಯದ ಮುಂದೆ ಪಿಕೆಟಿಂಗ್ ನಡೆಸಿ ಬಂಧನಕ್ಕೆ ಒಳಗಾದೆವು.
ನನ್ನ ಇಪ್ಪತ್ತರ ಹರೆಯದಲ್ಲಿ ರಾಮಮನೋಹರ ಲೋಹಿಯಾ ನನ್ನನ್ನು ಹೊಕ್ಕಿದ್ದು; ಇಂಡಿಯಾದ ವರ್ಗ, ವರ್ಣ ಜಾತಿ, ಲಿಂಗಭೇದ ತಾರತಮ್ಯದ ಸೂಕ್ಷ್ಮಗಳ ಬಗ್ಗೆ; ಅಸ್ಪೃಶ್ಯತೆ, ಮೌಢ್ಯ, ಕೀಳರಿಮೆಗಳು ಯಾವುದೇ ಸಮಾಜವನ್ನು ವಿನಾಶದ ಅಂಚಿಗೆ ತಳ್ಳಬಹುದೆಂಬ ಆತಂಕದ ಸ್ಥಿತಿಯ ಬಗ್ಗೆ ಧೃಡವಾಗಿ ಕಣ್ತೆರೆಯಲು ನನಗಂತೂ ಸಾಧ್ಯವಾದುದ್ದು ಲೋಹಿಯಾಪ್ರe್ಞÉಯ ಮೂಲಕವೇ. ಪ್ರಜಾಪ್ರಭುತ್ವ, ವಿಕೇಂದ್ರೀಕರಣ ಹಾಗೂ ಅಹಿಂಸೆಯ ದಾರಿಯನ್ನು ಆಯ್ಕೆಮಾಡಿಕೊಂಡು, ಮಾನವೀಯ ಮೌಲ್ಯಗಳ ಅನುಷಾವಿನಕ್ಕಾಗಿ ನಾವು ತೀವ್ರವಾಗಿ ಹೋರಾಡುವುದು ಅತ್ಯಂತ ಪ್ರಿಯವಾದ ಕಾಯಕವಾಗಬೇಕೆನ್ನುವ ಮನೋಧರ್ಮವನ್ನು ನಾನು ಅಲ್ಲಿಂದಲೇ ಪಡೆದಿದ್ದು. ಹಾಗೆಯೇ ನನ್ನ 'ಸಾಹಿತ್ಯೇತರ' ಲೋಕದ ಆಸಕ್ತಿಯ ಹೆಚ್ಚಿನ ವಿವರಗಳಿಗೆ, ನಮ್ಮ ಮೂಕಜನಸಮೂದಾಯವು ಒಳಗೊಂಡಿರುವ e್ಞÁನಪರಂಪರೆಗಳ ಅಲಿಖಿತ ದಾಖಲೆಯಾದ ಜಾನಪದವನ್ನೇ ನಾನು ಆಶ್ರಯಿಸಿದ್ದೇನೆ. ಜನಪರ ಆಲೋಚನೆಯ ಯಾವುದೇ ಸೂಕ್ಷ್ಮ ಮನಸ್ಸಿಗೆ ಈ ದಾರಿಯು ಅತ್ಯವಶ್ಯವೆಂದು ನಾನು ಖಚಿತವಾಗಿ ನಂಬಿದ್ದೇನೆ.
ಸ್ವಾತಂತ್ರ್ಯೋತ್ತರ ದಿನಗಳ ಆರಂಭದೊಟ್ಟಿಗೆ ಕಣ್ತೆರೆದು, ಬೆಳೆದು, ಬರೆಯಹೊರಟ ನಾನು ಮತ್ತು ನನ್ನ ಗೆಳೆಯರ ಕಣ್ಣೆದುರಿಗೆ ಕಳೆದ ಐವತ್ತು ವರ್ಷಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣದ ಜನಸಮುದಾಯದ ದಾರುಣ ಬದುಕು ಇದೆ. ಸಂವಿಧಾನದ ಮೂಲಕ ಲಭ್ಯವಾಗಿರುವ ಮೂಲಭೂತ ಅವಶ್ಯಕತೆಗಳೇ ಇನ್ನೂ ನಮ್ಮ ಜನತೆಗೆ ತಲುಪಿಲ್ಲ. ಇವುಗಳ ನಡುವೆಯೇ ನವವಸಹುತುಶಾಹಿಯಾದ ಏಕರೂಪ ಸಂಸ್ಕøತಿಯ ಬೀಜ ಬಿತ್ತುತ್ತಿರುವ ಜಾಗತೀಕರಣ, ಹುಸಿಸಂಸ್ಕøತಿಗಳ ವಾಹಕವಾಗಿರುವ ಮಾಧ್ಯಮಗಳು ಮತ್ತು ದಿನೇ ದಿನೇ ಹೆಚ್ಚಾಗುತ್ತಿರುವ ಕೋಮುವಾದಗಳ ವಿಕಟ ಅಟ್ಟಹಾಸ ಇವೆಲ್ಲವೂ ನಮ್ಮ ಬದುಕನ್ನು ಅಸಹನೀಯಗೊಳಿಸುತ್ತಿವೆ. ಇವುಗಳ ನಡುವೆ ನಾವಿಂದು ವೈಚಾರಿಕತೆಯ ಸೃಜನಶೀಲ ಗುಣಗಳನ್ನು ಕುರಿತು ಪರಸ್ಪರ ಚರ್ಚಿಸಲು ಇಲ್ಲಿ ಸೇರಿದ್ದೇವೆ.
ನಮ್ಮ ಕರ್ನಾಟಕದಂತೆಯೇ ಈ ಮಹಾರಾಷ್ಟ್ರದ ನೆಲವೂ ಕೂಡ ಬಹುದೊಡ್ಡ ವೈಚಾರಿಕ ಪರಂಪರೆಯನ್ನು ಹೊಂದಿದೆ. ಮಹಾತ್ಮಾ ಜ್ಯೋತಿಬಾಫುಲೆ, ಅಂಬೇಡ್ಕರ್ ಹಾಗೂ ಅನೇಕ ಅನುಭಾವಿ ಕವಿಗಳು, ಸಂತರು ಇಲ್ಲಿ ಆಗಿಹೋಗಿದ್ದಾರೆ. ಅಂಬೇಡ್ಕರ್ ಅವರಂತೂ ಮಹಾರಾಷ್ಟ್ರದ ಗಡಿಯನ್ನೂ ದಾಟಿ ಕನ್ನಡದ ನೆಲದಲ್ಲಿ ಹುಟ್ಟುಪಡೆದು ದಲಿತ ಚಳವಳಿಯ ಪ್ರe್ಞÉಯಲ್ಲಿ ಹಾಸುಹೊಕ್ಕಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಹಾಗೆಯೇ ನಮ್ಮಲ್ಲಿ ಒಂದು ತಲೆಮಾರಿನ ಲೇಖಕರು ಮತ್ತು ಅಸಮಾನತೆ ವಿರುದ್ಧದ ಹೋರಾಟಗಾರರನ್ನು ತನ್ನ ದಟ್ಟವಾದ ಪ್ರಭಾವಕ್ಕೆ ಒಳಪಡಿಸಿಕೊಂಡಿರುವ ನಮ್ಮ ಬಹುದೊಡ್ಡ ಚಿಂತಕರಲ್ಲಿ ಅಂಬೇಡ್ಕರ್ ಪ್ರಮುಖರಾದವರು ಅನ್ನುವುದನ್ನು ಕನ್ನಡದ ಸಾಂಸ್ಕøತಿಕ ಲೋಕ ಚೆನ್ನಾಗಿ ಅರಿತುಕೊಂಡಿದೆ. ಹಾಗೆಯೇ ನಮ್ಮ ಶ್ರೇಷವಿ ವಿದ್ವಾಂಸರಾದ ಶಂಬಾ ಜೋಶಿಯವರು ಮರಾಠಿ ಮತ್ತು ಕನ್ನಡ ಸಂಸ್ಕøತಿಗಳೆರಡನ್ನು ಗಂಬಿsೀರವಾಗಿ ಅಧ್ಯಯನ ಮಾಡಿರುವುದು ನಮ್ಮ ಬಾಂಧವ್ಯದ ದ್ಯೋತಕವಾಗಿದೆ. ಮರಾಠಿ ದಲಿತ ಲೇಖಕರುಗಳ ಆತ್ಮಕಥನಗಳು ಕನ್ನಡಕ್ಕೂ ಬಂದು, ನಮ್ಮಲ್ಲಿಯೂ ದಲಿತ ಜನಾಂಗದ ಆತ್ಮಕಥನಗಳ ಪರಂಪರೆ ಆರಂಭವಾಗುವುದಕ್ಕೆ ಕಾರಣವಾಗಿವೆ ಎಂಬುದನ್ನು ನಾವೆಲ್ಲ ಬಲ್ಲೆವು.
ಅಷ್ಟೇ ಏಕೆ? ಒಂದು ಕಾಲಕ್ಕೆ ಕನ್ನಡ ಸಂಸ್ಕøತಿಯ ಬಾಹುಗಳು ದೂರದ ಗೋದಾವರಿ ನದಿಯ ಅಂಚಿನ ತನಕ ಚಾಚಿಕೊಂಡಿದ್ದ ಸಂಗತಿಯನ್ನು ನಮ್ಮ ಕಾವ್ಯಗ್ರಂಥಗಳು ಹಿಂದಿನಿಂದಲೂ ವಿವರಿಸುತ್ತಿವೆ. ಹಾಗೆಯೇ ಈಗಿನ ಮಹಾರಾಷ್ಟ್ರ ಪ್ರದೇಶದಲ್ಲಿ ಮರಾಠಿ ಭಾಷೆಯ ಶಾಸನಗಳಿಗಿಂತ ಹೆಚ್ಚಿನ ಸಂಖ್ಯೆಯ ಕನ್ನಡ ಶಾಸನಗಳು ದೊರೆತಿರುವ ಸಂಗತಿಯೇ ಈ ನಮ್ಮೆರಡು ವಿಶಾಲ ರಾಜ್ಯಗಳ ಬಾಂಧವ್ಯವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. ಮುಂಬೈ ಕರ್ನಾಟಕದಲ್ಲಿ ಶಿಕ್ಷಣ ಸಚಿವರಾಗಿದ್ದ ನಮ್ಮ ಹುಬ್ಬಳ್ಳಿಯ ಸಿದ್ದಪ್ಪ ಕಂಬಳಿ ಅವರು ಸ್ವಾತಂತ್ರ್ಯಪೂರ್ವದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಅಪಾರ ಪ್ರತಿಭೆ, ಪಾಂಡಿತ್ಯ ಮತ್ತು ಜನಪರ ಚಿಂತನೆಗೆ ಅಕ್ಷರಶಃ ಮಾರುಹೋಗಿದ್ದರು. ಆ ಕಾರಣದಿಂದಾಗಿಯೇ ಒಣ-ಶಿಷ್ಟಾಚರವನ್ನು ಮುರಿದು ತಾವೇ ಖುದ್ದಾಗಿ ಅಂಬೇಡ್ಕರ್ ಅವರನ್ನು ಭೇಟಿಯಾಗಿ ಉನ್ನತ ಶಿಕ್ಷಣದ ಹೆಮ್ಮೆಯ ಹುದ್ದೆಗಳಾದ ಪ್ರಾಧ್ಯಾಪಕ ಮತ್ತು ಪ್ರಾಚಾರ್ಯಗಿರಿಗೆ ಆಹ್ವಾನ ನೀಡಿ ಗೌರವಿಸಿದುದು ಆ ಕಾಲದ ತೀರಾ ಅಪರೂಪದ ಶ್ಲಾಘನೀಯ ಮತ್ತು ಗುಣಪಕ್ಷಪಾತಿಯಾದ ಕಾರ್ಯವಾಗಿದೆ.
ವೈಚಾರಿಕತೆಯ ಸೃಜನಶೀಲ ಗುಣಗಳನ್ನು ಕುರಿತು ನಿಮ್ಮೆದುರು ಮಾತನಾಡುವ ಮೊದಲು, ವೈಚಾರಿಕತೆಯ ಬಗ್ಗೆ ನನಗಿರುವ ತಿಳುವಳಿಕೆಯನ್ನು ಇಲ್ಲೇ ಖಚಿತಪಡಿಸುತ್ತೇನೆ: ವೈಚಾರಿಕತೆಯು ಹೊಸ ಬದುಕಿನ ಮುನ್ನೋಟ ಹೊಂದಿದ್ದು, ಜನಪ್ರೀತಿಯ ವಿಕಾಸಕ್ಕೆ ಮತ್ತು e್ಞÁನದ ಎಲ್ಲ ಗ್ರಹಿಕೆಗೆ ನೆರವಾಗಬಲ್ಲ ಸರಳ ಹಾಗೂ ಸುಂದರ ಜೀವನ ವಿಧಾನವೆಂದು ನಾನು ನಂಬಿದ್ದೇನೆ. ನಮ್ಮ ಜಾನಪದ ಪರಂಪರೆಯ ಮುಗ್ಧಲೋಕದಲ್ಲಿ ವೈಚಾರಿಕತೆಯ ಬಗೆಗಳು ಅನೇಕ ವಿವರಗಳಲ್ಲಿ ಮೈದಾಳಿವೆ. ವಾಸ್ತವವಾಗಿ ನಮ್ಮ ಜಾನಪದಕ್ಕೆ ಪ್ರಕೃತಿದತ್ತವಾದ ಪಂಚಭೂತಗಳ ಉದಾರವೂ, ವಂಚನೆರಹಿತವೂ ಆದ ತಾಯ್ತನದ ಗುಣ ಇದೆ. ನೀರಿನ ಗುಣ, ಭೂಮಿಯ ಗುಣ, ಗಾಳಿಯ ಗುಣ ಹಾಗೂ ಆಕಾಶದಂತೆ ಅನಂತತೆಯ ಗುಣದೊಂದಿಗೆ ತಾಯಿಯ ಕರುಣೆ-ಪ್ರೀತಿಯನ್ನು ಸದಾ ಇಟ್ಟುಕೊಂಡಿರುವ ಪ್ರಯೋಗಶೀಲ ಪರಂಪರೆ ಇದು. ಮಂಗಳಕರವಾದದ್ದಕ್ಕೆ ನಿತ್ಯವೂ ಹಾರೈಸುವ ಮನಸಂಪನ್ನ ಗುಣ ನಮ್ಮಲ್ಲಿದೆ. ನಂದಿವಾಹನ, ನಾಗಾಭರಣ, ನಂಜುಂಡ, ಅರ್ಧನಾರೀಶ್ವರ, ದಕ್ಷಿಣಾಮೂರ್ತಿ, ಗಂಗಾಧರ, ಭೂತನಾಥ-ಮುಂತಾದ ಅಸಾಧಾರಣ ಗುಣಗಳ ಗಣಿಯಾಗಿರುವ ಲಿಂಗರೂಪಿ ಶಿವನ ಕಲ್ಪನೆಯು ಮೂಲತಃ ಜಾನಪದದ ಚಿತ್ತಾಕರ್ಷಕವೂ, ಮಾನವೀಯವೂ ಆದ ಚಿಂತನೆಯ, ಧಾನ್ಯದ ಪ್ರತಿರೂಪವಾಗಿ ಮೂಡಿ ಬಂದಿದೆ. ಸಮಾಜದ ನೋವು, ಅಪಮಾನದ ಹಿನ್ನೆಲೆಗಳಿಂದ ಬಂದಿರುವ ನಮ್ಮ ಜನಪದರು ತಮ್ಮ ನಿರಂತರ ಪ್ರಯೋಗಶೀಲ ಪ್ರಯತ್ನಗಳ ಮೂಲಕ ಆರಂಬಿsಸಿದ ಚಟುವಟಿಕೆಗಳು ಇವಾಗಿವೆ. ಈ ಪ್ರಯತ್ನಗಳು ಕಥೆ, ಕಾವ್ಯ, ಐತಿಹ್ಯ, ಗಾದೆ, ಒಗಟ್ಟು ಮುಂತಾದ ನಾನಾ ಪ್ರಕಾರಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಂಡು ಬರುತ್ತವೆ.
ಹೆಣ್ಣು-ಗಂಡಿನ ಹಕ್ಕುಬಾಧ್ಯತೆಗಳ ಸಂಬಂಧದಲ್ಲಿ ನಮ್ಮದು ಯಾವಾಗಲೂ ಇಬ್ಬಗೆಯ ನೀತಿಯೇ ಆಗಿದೆ : ಹೆಣ್ಣಿಗೆ ಭಾರತೀಯ ನಡವಳಿಕೆಯಲ್ಲಿ, ಸಾಹಿತ್ಯದಲ್ಲಿ ಪೂಜ್ಯತೆಯ ಮಾತಿರಲಿ ಸಮಾನತೆಯೂ ಕಂಡು ಬರುತ್ತರಲಿಲ್ಲ-ಎನ್ನುವುದೇ ನೋವಿನ ಸಂಗತಿಯಾಗಿದೆ. ತಾಯಿ ದೇವರು ಎನ್ನುವುದು ಕೇವಲ ಬಾಯಿಮಾತಿನ ವಿಚಾರ ಮಾತ್ರವೇ ಆಗಿ, ಹೆಣ್ಣು-ಹೊನ್ನು, ಮಣ್ಣುಗಳು ಜನತೆಯ ಭೋಗಸಾಮಗ್ರಿಯಾಗಿ; ಗಂಡಿನ ಕಣ್ಣಿನ ಮಾಯೆಯಾಗಿ; ಶೂದ್ರಾತಿಶೂದ್ರವರ್ಗಗಳ ಹಕ್ಕುಗಳಿಗೆ ಮಾತ್ರ ಸಮ ಅಥವಾ ಅದಕ್ಕೂ ಕೀಳಾಗಿ ಪರಿಗಣಿತವಾದ ಸ್ಥಿತಿಯನ್ನು ಮನಧರ್ಮಶಾಸ್ತ್ರವೇ ಮುಂತಾದ ವೈದಿಕ ಧರ್ಮ ಶಾಸ್ತ್ರದ ಕಟ್ಟುಕಡತಗಳೆಲ್ಲಾ ಒಕ್ಕೊರಳಿನಿಂದ ವರ್ಣಿಸಿವೆ. ಈ ನಡುವೆ ಆಕೆ ತನ್ನ ದಿಕ್ಕೆಟ್ಟ ಹಾಗೂ ವಿವೇಚನಾಶೂನ್ಯ ಪರಿಸ್ಥಿತಿಯಲ್ಲಿ ಅನುಭವಿಸಿದ ಬವಣೆ, ನೋವುಗಳನ್ನು ತ್ಯಾಗ ಬಲಿದಾನಗಳೆಂದು ಹೇಳಿದಲ್ಲಿ-ಮಾನವ ಮನಸ್ಸನ್ನು ಚುಚ್ಚುವ, ಸುಡುವ ಕ್ರಿಯೆಯನ್ನೇ ಸುಂದರವಾದ ಮಾತುಗಳಲ್ಲಿ ವೈಭವಿಸಿ ಸಡಗರದಲ್ಲಿ ಹೇಳಿದ ಆತ್ಮವಂಚನೆಯಾಗುತ್ತದೆ. ಅನಂತವಾದ ನೋವಿನ ನಡುವೆಯೂ ಕಾಡುಪಾಲಾಗುತ್ತಿರುವ ತುಂಬುಗಬಿರ್sಣಿ ಸೀತೆ 'ಕರುಣಾಳು ರಾಘವನಲ್ಲಿ ತಪ್ಪಿಲ್ಲ!' ಎಂದು ಉದ್ಗರಿಸಿದ್ದನ್ನು ಹೀಗೆಯೇ ವೈಭವಿಸುವವರೂ ಇದ್ದಾರೆ. ಆದರೆ, ಆಕೆ ಲವಕುಶರನ್ನು ಹೆತ್ತು, ಹೊತ್ತು, ಆ ಮಕ್ಕಳು ತಮ್ಮ ತಂದೆ-ಚಿಕ್ಕಪ್ಪಂದಿರುಗಳನ್ನು ಸೋಲಿಸಿದ ಮೇಲೆ-ಅಗ್ನಿಪರೀಕ್ಷೆಯಲ್ಲಿ ಗೆದ್ದ ನಂತರವೂ ಶೀಲವನ್ನು ಶಂಕಿಸಿದ, ಅನೇಕ ವಿಘ್ನಗಳ ಸರಮಾಲೆಯನ್ನೇ ಒಡ್ಡುತ್ತಾ ನಿಂತ 'ಪತಿದೇವ' ರಾದ ಶ್ರೀರಾಮನ ಜತೆಗೆ ಅಯೋಧ್ಯೆಗೆ ಬರಲೊಪ್ಪದೆ ತನ್ನ ತವರು (ತಾಯಿ ಭೂದೇವಿಯ ಗರ್ಭ) ಸೇರುವ ನಿರ್ಧಾರದ ಮೂಲಕ ಮೌನ-ಪ್ರತಿಭಟನೆಯನ್ನು ಸೂಚಿಸಿದ ರೀತಿಯನ್ನು ನಾವು ಗಮನಿಸಬಾರದೇಕೆ? ಹೆಣ್ಣನ್ನು ಸಮಗ್ರ ದೃಷ್ಟಿಯಿಂದ ನೋಡಲು ಸಾಧ್ಯವಾಗದ ಈ ಕೆಟ್ಟ ಚಾಳಿ ಜನಪದ ಸಾಹಿತ್ಯಕ್ಕೆ ಶಿಷ್ಟ ಪರಂಪರೆಯಿಂದಲೇ ಬಂದ ಬಳುವಳಿಯಾಗಿದೆ; ಬಹುಸಂಖ್ಯರ ಜೀವನ ವಿಧಾನಕ್ಕೆ ನಿಕಟವಾದುದ್ದನ್ನೇ ನಿರೂಪಿಸುವ ಸ್ವಭಾವದ ಜಾನಪದ-ಯಾವುದು ನಡವಳಿಕೆಯಲ್ಲಿ ಕಂಡುಬರುತ್ತಿತ್ತೋ ಅದನ್ನೇ ತನ್ನ ಒಡಲಿನಲ್ಲಿ ಅಡಗಿಸಿಟ್ಟುಕೊಂಡಿದ್ದಲ್ಲಿ ಯಾಕೆ ಆಶ್ಚರ್ಯವಾಗಬೇಕು? ಹೆಣ್ಣನ್ನು ಕುರಿತ ಹೆಚ್ಚಿನ ಟೀಕೆ, ಆಕ್ಷೇಪಣೆಗಳು ಅಲ್ಲಿ ಕಂಡುಬಂದಲ್ಲಿ ನಮ್ಮ ಪಾಶ್ರ್ವವಾಯುಪೀಡಿತ ಸಮಾಜದ ರೋಗಗ್ರಸ್ತಸ್ಥಿತಿಯಂತಹ ಕಟುಸತ್ಯವೊಂದು ಇಲ್ಲಿ ಪ್ರಕಟವಾಗುತ್ತಿದೆ ಎಂಬ ಮುಖ್ಯ ದಾಖಲೆಯನ್ನಾಗಿ ನಾವು ಸ್ವೀಕರಿಸಬೇಕಾಗುತ್ತದೆ. ಇದರ ಜತೆಯಲ್ಲೇ ಮೂಕಯಾತನೆಯನ್ನು ಅನುಭವಿಸುತ್ತಾ ಬಂದಿದ್ದು, ಆ ಅನುಭವವಲಯದ ಆಲೋಚನೆಗಳು ಜಾನಪದದಲ್ಲಿ ಕಂಡುಬರುವುದನ್ನು ನಾವು ಪರಿಶೀಲಿಸಬೇಕಾಗಿದೆ.
ಸಾP್ಷÁತ್ ಬುದ್ಧದೇವನೂ ಕೂಡ ನಮ್ಮ ಜಾನಪದದ ಮಂಗಳಕರವಾದ ತುಂಬು ಮನಸ್ಸಿನ ಆಶಯಗಳ ಹಿನ್ನೆಲೆಯಲ್ಲಿ ಸಕಲಜೀವಿಗಳೊಡನೆ ನಿರಾಳವಾಗಿ ಬದುಕಬೇಕು ಎಂಬ ಚಿಂತನೆಯನ್ನು ಹೇರಳವಾಗಿ ಹೊಂದಿದ್ದವನು. ಅಸೂಯೆ-ದುರಾಸೆಗಳಿಲ್ಲದೆ, ಹಿಂಸೆಯಿಲ್ಲದೆ ಎಲ್ಲರೂ ಸಹಜವಾಗಿ, ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿಗಳೆಲ್ಲದರ ಒಡನಾಟದಲ್ಲಿ ಮೈತ್ರಿಭಾವದಿಂದ ಬದುಕುವ ವಾತಾವರಣಕ್ಕೆ ಉದ್ದಕ್ಕೂ ಹಂಬಲಿಸಿದವನು. ವೈಚಾರಿಕತೆಯ ತಳಹದಿಯ ಮೇಲೆ ಮೌಢ್ಯ-ಕಂದಾಚಾರಗಳಿಲ್ಲದ ತನ್ನ ಧರ್ಮವನ್ನು ಸರಳವಾಗಿ ಬೋದಿsಸಿದವನು. ಈ ಅರ್ಥದಲ್ಲಿ ಇಂಡಿಯಾದಲ್ಲಿ ಜಾತಿಪದ್ಧತಿ, ಅಸ್ಪ್ನೃಶ್ಯತೆ, ಅಸಮಾನತೆ ಮತ್ತು ಲಿಂಗಭೇದನೀತಿಯಂತಹ ಜನತೆಯ ಹಿತಕ್ಕೆ ಮಾರಕವಾಗುವ ಹೀನ ನಡವಳಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಪರಿಶುದ್ಧ ವಿಚಾರಧಾರೆಯು ನಮಗೆ ಮೊದಲಿಗೆ ಬುದ್ಧನಿಂದ ದೊರೆಯಿತು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು ಜಾತಿಪದ್ಧತಿಯಿಂದ ನರಳುತ್ತಿರುವ ಹಿಂದೂಧರ್ಮವನ್ನು ತೊರೆದು ಬೌದ್ಧಧರ್ಮಕ್ಕೆ ಪರಿವರ್ತನೆಯಾದದ್ದು ಅಕ್ಷರಶಃ ಮಹತ್ವಪೂರ್ಣವಾದುದ್ದು. ಹೃದಯವಂತಿಕೆ, ಚಿಂತನೆ-ಮರುಚಿಂತನೆ, ಆರೋಗ್ಯಕರವಾದುದೆಲ್ಲದರ ಕಡೆಗೆ ನಿರಂತರ ತುಡಿತ ಹಾಗೂ ಸಕಲ ಜೀವರಾಶಿಯನ್ನೂ ಅಪಾರ ಗೌರವದಿಂದ ಕಾಣುವ ಮನಸ್ಸು ವೈಚಾರಿಕತೆಯ ಒಡಲಲ್ಲಿ ಸದಾ ಇರುತ್ತದೆ. ನಮ್ಮೆಲ್ಲ ಚಿಂತನೆಗಳು ಮನುಕುಲದ ಏಳಿಗೆಗಾಗಿಯೇ ಇದ್ದು ಜನಸಮುದಾಯವನ್ನು ಬೆಳೆಸುವಂತಿರಬೇಕು. ಈ ಬಗೆಯ ಒಟ್ಟು ಮನಸ್ಥಿತಿಯು ಬುದ್ಧದೇವನಲ್ಲಿರುವ ಹೃದಯ ಸಂಪನ್ನತೆ ಮತ್ತು ಆ ಕಾರಣದಿಂದಾಗಿಯೇ ಇನ್ನಿಲ್ಲದಂತೆ ಕಂಡಬರುವ ತುಂಬು ಪ್ರಸನ್ನತೆಯು ನಮಗೆ ಊರುಗೋಲಾಗಬೇಕಾಗಿದೆ.
ಕನ್ನಡ ಸಾಹಿತ್ಯ ಪರಂಪರೆಯೂ ಕೂಡ ಇದೇ ಬಗೆಯ ಉತ್ಕಟವಾದ ನಿತ್ಯ ಮಂಗಳಕರತತ್ವವನ್ನು ಒಳಗೊಂಡು ಸಾಗಿ ಬಂದಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಆರಂಭದ ಗ್ರಂಥವಾಗಿರುವ ಕವಿರಾಜಮಾರ್ಗದಲ್ಲಿ ಇಂತಹ ಆಶಯಗಳು ಕಂಡು ಬಂದಿವೆ. ಪಂಪನ ಬನವಾಸಿಯ ವರ್ಣನೆಯಲ್ಲಿ ಒಂದು ಸಮೃದ್ಧ ಸಮಾಜ ಹೇಗಿರಬೇಕೆಂಬ ಬಗ್ಗೆ ವಿವೇಚನೆ ಇದೆ. ಅಲ್ಲಿ ತ್ಯಾಗಜೀವಿಗಳಿರಬೇಕು, ಅಕ್ಷರ e್ಞÁನದಿಂದ ಸಮಾಜವು ತುಂಬಿರಬೇಕು, ಹೃದಯವಂತರಿರಬೇಕು, ಕಾವ್ಯ-ಸಂಗೀತಬೇಕು. ಪರಸ್ಪರ ಚಿಂತನೆ-ವಿಮರ್ಶೆಯ ಮೂಲಕ ಬೆಳೆಯಬೇಕು-ಇವೆಲ್ಲವುಗಳಿಂದ ತುಂಬಿರುವ ಸಮಾಜ ನಮಗೆ ಬೇಕು ಎಂದು ಹಾರೈಸಿದ್ದಾನೆ. ತನ್ನ "ವಿಕ್ರಮಾರ್ಜುನ ವಿಜಯ" ಎಂಬ ಶೀರ್ಷಿಕೆಯನ್ನು ಕೊನೆಗೆ "ಕರ್ಣರಸಾಯನಂ" ಎಂದು ತಾನೇ ಬುದ್ಧಿಪೂರ್ವಕವಾಗಿ ಬದಲಾಯಿಸುತ್ತಾನೆ. ವಾಸ್ತವವಾಗಿ ತೆಳುವಾದ ಅವಿವೇಕದಿಂದ ಹೊರಟು ಕ್ರಮೇಣ ತುಂಬು ವಿವೇಕದ ತುತ್ತತುದಿಗೆ ಏರಿದವನ ಚಿತ್ರ ಅಲ್ಲಿ ನಮಗೆ ಸಿಗುತ್ತದೆ. ಅಪಾರ ಸೌಂದರ್ಯಪ್ರe್ಞÉ ಇರುವ ಪಂಪ ಕವಿಯು ಬದುಕಿನ ಸಂಘರ್ಷಗುಣಗಳನ್ನು ಹತ್ತಿರದಿಂದ ಕಂಡವನು. ತನ್ನ ಆದಿಪುರಾಣದಲ್ಲಿ ಜೈನಧರ್ಮವನ್ನು ಕಟುಟೀಕೆ ಮಾಡುವ ಲೋಕಾಯತ ಚಿಂತನೆಯ ಹಿನ್ನೆಲೆಯ ಒಂದು ಒಳ್ಳೆಯ ಪದ್ಯ ಇದೆ. ಪಂಪನಿಗೆ ಜೈನಧರ್ಮದ ಬಗ್ಗೆ ಎಷ್ಟೇ ನಂಬಿಕೆಯಿದ್ದರೂ, ಬಿsನ್ನಮತವನ್ನು ಹೊಂದಿರುವವರ ವಿಚಾರಗಳನ್ನು ನಾವು ಗಂಬಿsೀರವಾಗಿ ಪರಿಗಣಿಸಿ, ಕೊನೆಯ ನಿರ್ಧಾರಕ್ಕೆ ಬರುವುದು ಸೂಕ್ತವೆನ್ನುವಂತೆ ಆತ ಆಲೋಚಿಸಿರುವುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಈ ಬಗೆಯ ವಿವೇಚನೆಯನ್ನು ನಾವು ಬಸವಣ್ಣ ಮತ್ತು ಕುವೆಂಪುರವರ ಬರಹಗಳಲ್ಲಿ ಸಹ ಕಾಣಬಹುದಾಗಿದೆ.
ಜಾತಿಪದ್ಧತಿ, ಅಸಮಾನತೆ, ಲಿಂಗಭೇದನೀತಿ, ಅಸ್ಪೃಶ್ಯತೆಯ ಹಿನ್ನೆಲೆಯ ವಿಚಾರಗಳಲ್ಲಿ ಬಸವಣ್ಣನು ಅಪಾರ ಕಳಕಳಿಯಿಂದ ಸವರ್ಣೀಯ ಮನಸ್ಸಿನ ಮಲಿನತೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ. ಮುಂದೆ ಲೋಹಿಯಾ ಇದನ್ನೆಲ್ಲಾ ಇನ್ನಷ್ಟು ವೈe್ಞÁನಿಕವಾಗಿ, ಹೃದಯಕ್ಕೆ ನೇರವಾಗಿ ತಾಗುವಂತೆ ವಿವರಿಸಿದರು. ಹರಿಹರ ಕೂಡ ವಚನಕಾರರ ದಾರಿಯಲ್ಲೆ ಸಾಗಿದವನು; ಅಸ್ಪೃಶ್ಯರು, ಕೆಳಜಾತಿಯವರು ಮತ್ತು ತಬ್ಬಲಿ ಜಾತಿಗಳ ಬಗ್ಗೆ ಅಪಾರವಾದ ಗೌರವವನ್ನು ಒಳಗೊಂಡಿದ್ದ ಕವಿ ಈತ. ಶಿವರಾಮ ಕಾರಂತರೂ ಸಹ ಇದೇ ಮೌಲ್ಯಗಳ ಹಾದಿಯ ಪಯಣಿಗ ಆಗಿದ್ದಾರೆ : ಮೌಢ್ಯ ಮತ್ತು ಅಸಮಾನತೆಗಳ ವಿರುದ್ಧ ಬೆಂಕಿಯುಂಡೆಯಂತೆ ಇವರು ಸಿಡಿದೆದ್ದವರು.
ಹೀಗೆ ಬುದ್ಧದೇವನಿಂದ ಮೊದಲುಗೊಂಡು ಬಸವಣ್ಣ, ಗಾಂದಿs, ಲೋಹಿಯಾ, ಕುವೆಂಪು, ಅಂಬೇಡ್ಕರ್, ಪೆರಿಯಾರರು ಹೊಸ ಚಿಂತನೆಯ ದಾರಿಯಲ್ಲಿ ನೆರವಾದವರಾಗಿದ್ದಾರೆ. ಈ ಅರ್ಥದಲ್ಲಿ ಕನ್ನಡದ ವೈಚಾರಿಕ ಪರಂಪರೆಯು ಜಾತ್ಯತೀತವೂ, ಮಾನವೀಯವೂ ಆಗಿದ್ದು, ನಿಬಿರ್sೀತಿ ಮತ್ತು ಸಮಾನತೆಯ ಗುಣಗಳಿಗೆ ನಿರಂತರವಾಗಿ ಒತ್ತು ಕೊಡುತ್ತದೆ.
ವೈಚಾರಿಕತೆ ಎನ್ನುವುದನ್ನು ಕೇವಲ ಬೀದೀಭಾಷಣವೆಂದು ತಿಳಿದ ಬರಡು ಮನಸ್ಸಿನ, ಅರೆಬರೆ ವಿಚಾರವಾದಿಗಳ ತಂಡವೇ ನಮ್ಮಲ್ಲಿ ಇದೆ. ವಿಚಾರವಾದವೆನ್ನುವುದು ಮನುಷ್ಯನ ಏಳ್ಗೆಗೆ ಪೂರಕವಾಗಿರಬೇಕು ಮತ್ತು ಅದು ಸದಾ ಸತ್ಯಶೋಧನೆಯ ದಾರಿಯಲ್ಲಿರಬೇಕು. ಈ ಗುಣಗಳನ್ನು ನಾನು ಕುವೆಂಪು ಅವರಲ್ಲಿ ಹೆಚ್ಚಾಗಿ ಕಂಡಿದ್ದೇನೆ. ಆದರೂ ಅವರು ಪುನರ್ಜನ್ಮದ ಬಗ್ಗೆ, ಕುತೂಹಲವನ್ನು ಹೊಂದಿದ್ದರು. ಪುನರ್ಜನ್ಮ ಇರುವುದಾದರೆ, ಆ ಬಗೆಯ ಸತ್ಯದ ಕಿರಣದಿಂದ ನಾನು ವಂಚಿತನಾಗಬಾರದು ಎಂಬ ಚಿಂತನೆಯು ಅವರಲ್ಲಿ ಇದ್ದಂತೆ ಕಾಣುತ್ತಿದೆ. ಕುವೆಂಪು ಅವರು ಮನಸ್ಸಿನ ಪರಿಶುದ್ಧತೆಗೆ ಮತ್ತು ಸೃಜನಶೀಲ ವಿಕಾಸಕ್ಕೆ ಧ್ಯಾನ ಮಾಡುತ್ತಿದ್ದರು. ಹೀಗೆ ಒಬ್ಬ ನಿಜವಾದ ವೈಚಾರಿಕನು ಸಂತನ ಮನಸ್ಸನ್ನೂ, ತಾಯಿಯ ಕಟ್ಟಕ್ಕರೆಯನ್ನು ಏಕಕಾಲಕ್ಕೆ ಹೊಂದಿರುತ್ತಾನೆ.
ವೈಚಾರಿಕತೆಯ ಹಿನ್ನೆಲೆಯ ನಾವು ದೇವಾಲಯಗಳನ್ನು, ಪ್ರಾರ್ಥನಾ ಮಂದಿರಗಳನ್ನು ಅಸಡ್ಡೆಯಿಂದ ಕಾಣುವುದೂ ಕೂಡ ತಪ್ಪು. ಅವರವರಿಗೆ ಪ್ರಿಯವಾದುದ್ದನ್ನು ಮಾಡುವ ಹಕ್ಕು ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಈ ಬಗೆಯ ಯಾವ ಚಟುವಟಿಕೆಗಳೂ ಸಮಾಜವಿರೋದಿs ಆಗಿರಬಾರದು, ಅಷ್ಟೆ. ಸಮಾಜವಿರೋದಿs ಚಟುವಟಿಕೆಗಳನ್ನು ವಿಚಾರವಾದದ ಹೆಸರಿನಲ್ಲಿ ಯಾವ ಅವಿವೇಕಿ ಮಾಡಿದರೂ ತಪು ಅಥವಾ ಒಬ್ಬ ಸಂಪ್ರದಾಯಸ್ಥ ಮಾಡಿದರೂ ತಪ್ಪು. ಈ ನಿಲುವನ್ನಿಟ್ಟುಕೊಂಡೇ ನಾವೆಲ್ಲ ಒಟ್ಟಾಗಿ ಮುಂದುವರಿಯಬೇಕಾಗಿದೆ.
ಕನ್ನಡದ ಪರಂಪರೆಯು ಎಂಥ e್ಞÁನದಾಹಿಯಾದುದೆಂದರೆ, ಅನ್ಯ ಸಂಸ್ಕøತಿಗಳಲ್ಲಿರುವ e್ಞÁನಧಾರೆಯನ್ನು ಯಾವ ಮಡಿವಂತಿಕೆಯೂ ಇಲ್ಲದೆ ತನ್ನೊಳಗೆ ಪ್ರೀತಿಯಿಂದ ಕಾಲಕಾಲಕ್ಕೆ ಬರಮಾಡಿಕೊಂಡಿದೆ. ಈ ಅರ್ಥದಲ್ಲಿ ಬುದ್ಧ, ಸೂಪಿs ಸಂತರು, ಅಂಬೇಡ್ಕರ್, ಫುಲೆ, ಗಾಂದಿs, ಲೋಹಿಯಾ, ಪೆರಿಯಾರ್, ನಾರಾಯಣಗುರು-ಇವರೆಲ್ಲ ಕನ್ನಡದ ವೈಚಾರಿಕ ಪ್ರe್ಞÉಯ ವಿಕಾಸಕ್ಕೆ ವಿವಿಧ ಪ್ರಮಾಣಗಳಲ್ಲಿ ಕಾರಣರಾಗಿದ್ದಾರೆ.
ಕನ್ನಡದ ವೈಚಾರಿಕ ಪ್ರe್ಞÉಯ ಸಂಪುಟದಲ್ಲಿ ಪೆರಿಯಾರ್ ಕೂಡ ಒಂದು ಪ್ರಮುಖ ಅಧ್ಯಾಯ. ಪುರೋಹಿತಶಾಹಿಯ ವಿರುದ್ಧ, ಜಾತಿಪದ್ಧತಿಯ ವಿರುದ್ಧ ಸಿಡಿದೆದ್ದ ಬಹುದೊಡ್ಡ ಬಂಡುಕೋರ ಅವರು. ಶೂದ್ರ ಸಂಸ್ಕøತಿಯ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿರುವ ವೈದಿಕ ಸಂಸ್ಕøತಿಯ ಕುರುಹುಗಳ ವಿರುದ್ಧ ಉಗ್ರವಾಗಿ ಪ್ರತಿಭಟಿಸಿದ ಹೋರಾಟಗಾರ. ಅಂಬೇಡ್ಕರ್ ಅವರಾಗಲಿ, ಲೋಹಿಯಾ ಅಥವಾ ಪೆರಿಯಾರ್ ಎಂದೂ ಜನಾಂಗದ್ವೇಷಿಗಳಾಗಿರಲಿಲ್ಲ. ಪೆರಿಯಾರ್, ಕೋವೂರ್, ಗೋರಾ ಮಿತಿಗಳುಳ್ಳವರಾಗಿದ್ದರು! ಆದರೆ, ಹೊಸ ಸಾಂಸ್ಕøತಿಕ ಬದುಕಿಗಾಗಿ ಹಾರೈಸಿದ ಅಪರೂಪದ ಪ್ರಾಮಾಣಿಕ ಚೇತನಗಳು. ಇವರೆಲ್ಲರ ಒಟ್ಟಿಗೆ ನಾವು ಹೋಗಿದ್ದರಿಂದ, e್ಞÁನವನ್ನು ಯಾವ ಯಾವ ಮೂಲೆಗಳಿಂದ ಪಡೆಯಬಹುದು ಎನ್ನುವುದು ಗೊತ್ತಾಯಿತು. ಈ ಅರ್ಥದಲ್ಲಿ ಲೋಹಿಯಾ ಹೃದಯಸಂಪನ್ನ ವಿಚಾರವಾದಿ, ಕ್ರಾಂತಿಕಾರಿಯ ಸಕಲ ಸಲ್ಲಕ್ಷಣಗಳುಳ್ಳ ಸಂತ. ಕಳೆದ ಶತಮಾನದ ಒಟ್ಟು ಸಾಂಸ್ಕøತಿಕ ಇತಿಹಾಸದಲ್ಲಿ ಕುವೆಂಪು, ಕಾರಂತ, ಲಂಕೇಶ್ ಮುಖ್ಯರಾಗಿ ಕಾಣುತ್ತಾರೆ. ಅಭದ್ರತೆಯ ನಡುವಿನಿಂದಲೇ ಬಂದ ಈ ದಾರ್ಶನಿಕ ಲೇಖಕರು ತಮ್ಮ ಚಿಂತನೆ ಮತ್ತು ಸೃಜನಶೀಲ ಬರವಣಿಗೆಗಳ ಮೂಲಕವೇ ಈ ನಾಡಿನ ವೈಚಾರಿಕಪ್ರe್ಞÉಯು ಜೀವಂತವಾಗಿರುವಂತೆ ಉದ್ದಕ್ಕೂ ನೋಡಿಕೊಂಡಿದ್ದಾರೆ. ವೈಚಾರಿಕತೆಯ ವಿವೇಕ ಎನ್ನುವುದು ಅಂತಿಮವಾಗಿ ಸತ್ಯಶೋಧನೆಯ ಮಾರ್ಗವಾಗಿ ಬದುಕಿನ ಎಲ್ಲ ಮುಖಗಳನ್ನು ಒಳಗೊಂಡಿರುವುದರಿಂದ ಇದನ್ನು ಮಾನವೀಯ ಸೃಜನಶೀಲ ತತ್ವ ಎನ್ನಬಹುದು.
ವೈಚಾರಿಕಪ್ರe್ಞÉಯ ಹುಡುಕಾಟ ಮೂಲಭೂತವಾಗಿ ನಮ್ಮ ಬೌದ್ಧಿಕ ಕುತೂಹಲವನ್ನು ತಣಿಸಬಹುದಾದರೂ ಇದೇ ಅಂತಿಮ ಮಾರ್ಗವೆಂದು ತಿಳಿಯಬೇಕಾಗಿಲ್ಲ. ಕಾರಣ : ಅನಕ್ಷರತೆ, ಕಣ್ಣು ಕೋರೈಸುವಷ್ಟಿರುವ ಜಾನಪದೀಯ ಆಚರಣೆ, ಬಗೆ ಬಗೆಯ ಧಾರ್ಮಿಕ ಪರಂಪರೆಗಳು, ಬಹುಮುಖೀ ಸಂಸ್ಕøತಿಗಳು ಇಡಿಕಿರಿದಿರುವ ನಮ್ಮ ಗ್ರಾಮೀಣಲೋಕದ ಅದೆಷ್ಟೋ ನಿಗೂಢಗಳು ಕೇವಲ ವೈಚಾರಿಕತೆಯ ಕಣ್ಣುಗಳಿಗೆ ಗೋಚರಿಸುವುದಿಲ್ಲ. ನಮ್ಮ ಗ್ರಾಮೀಣಲೋಕದ ಒಳಸಂಸ್ಕøತಿಗಳಲ್ಲಿರುವ ಸೂP್ಷÁ್ಮತಿಸೂಕ್ಷ್ಮಗಳನ್ನು ಕುವೆಂಪು-ಕಾರಂತ-ಗೊರೂರು-ಮಾಸ್ತಿ ಕೊಡುವಷ್ಟು ಹೃದ್ಯವಿವರಗಳನ್ನು ನಮಗೆ ಸಮಾಜಶಾಸ್ತ್ರೀಯ ಅಧ್ಯಯನಗಳು ನೀಡುವುದಿಲ್ಲ. ಹೀಗಾಗಿ ನಾನು ಸಂಸ್ಕøತಿಕೇಂದ್ರಿತ ಅಧ್ಯಯನ ಮತ್ತು ಸಂಘರ್ಷಗಳ ಸ್ವರೂಪವನ್ನು ಅರಿಯಲು ಕುವೆಂಪು-ಕಾರಂತರನ್ನು ಮೊದಲುಗೊಂಡು ನಮ್ಮ ಮೌಖಿಕ ಪರಂಪರೆಯ ಹಲವು ರೀತಿಯ ಅಬಿsವ್ಯಕ್ತಿಗಳ ಬೆನ್ನು ಹತ್ತುತ್ತೇನೆ.
ಜನಸಮುದಾಯದ ಸುದೀರ್ಘ ಅವದಿsಯ ವಿವಿಧ ಅಬಿsವ್ಯಕ್ತಿಗಳಾದ ಧರ್ಮ, ದೈವ, ನಂಬಿಕೆ, ಆಚರಣೆಗಳು, ನುಡಿಗಟ್ಟುಗಳು, ಅವರ ಬಗೆಬಗೆಯ e್ಞÁನ ಶಾಖೆಗಳು ಇವೆಲ್ಲ ನಿರಾಕಾರ ಸತ್ಯಗಳು : ಇವೆಲ್ಲವನ್ನೂ ಒಳಗೊಂಡು ಲೋಕವನ್ನು ತಮ್ಮದೇ ಕ್ರಮದಲ್ಲಿ ಗ್ರಹಿಸಿ, ಅಗಾಧ ಮಾನವಪ್ರೇಮದಿಂದ ಕಾವ್ಯ ರಚಿಸಿದ ಅನುಭಾವಿಗಳು ನಮ್ಮ ಪರಂಪರೆಯಲ್ಲಿದ್ದಾರೆ. ಜೀವನ ದರ್ಶನವನ್ನು ತಮ್ಮ ಮಿತವಾದ ಮಾತು ಮತ್ತು ಮೌನದ ಮೂಲಕ ತೋರಿದ ಕವಿಗಳು ನಮ್ಮಲ್ಲಿ ಆಗಿಹೋಗಿದ್ದಾರೆ. ಕಾಶ್ಮೀರದ ಲಲ್ಲೇಶ್ವರಿಯಿಂದ ಕನ್ನಡದ ಶಿಶುನಾಳ ಶರೀಫರವರೆಗೂ ಈ ಸಂತತಿ ಹಬ್ಬಿಹರಡಿದೆ. ಇವರನ್ನೆಲ್ಲಾ ವೈಚಾರಿಕತೆಯ ಠೇಂಕಾರದ ಕಣ್ಣುಗಳಿಂದ ತಿರಸ್ಕರಿಸುವುದು ವಿವೇಕವಾಗುವುದಿಲ್ಲ. ಅಂದರೆ, ವೈಚಾರಿಕತೆಯೆನ್ನುವುದು ಎಲ್ಲಕ್ಕೂ ಏಕೈಕ ಪರುಷಮಣಿ ಅಲ್ಲ; ಸರ್ವರುಜಾಪಹಾರಿಣಿಯಂತು ಮೊದಲೇ ಅಲ್ಲ-ಎಂದು ತಿಳಿಯುವುದು ನಮ್ಮ e್ಞÁನ ಸಂಬಂಧದ ತುಂಬು ವಿನಯವಾಗಿರಬೇಕು. ಈ ಅರ್ಥದಲ್ಲೇ ವಚನಕಾರರು ಕುಲಮದ, ಧನಮದ, ವಿದ್ಯಾಮದದವರನ್ನು ಕಡೆಗಣಿಸಿದ್ದಾರೆ.
ಲೌಕಿಕದ ಸತ್ಯಶೋಧನೆಗಿರುವ ನಮ್ಮ ಅನಂತ ದಾರಿಗಳಲ್ಲಿ ವೈಚಾರಿಕತೆ ಸಹ ಒಂದು ಎಂಬುದಾಗಿ ತಿಳಿಯುವುದು ಸೂಕ್ತವಾಗಿದೆ. ವೈಚಾರಿಕ ಬುದ್ಧಿಯ ಮೂಲಕ ಲೋಕವನ್ನು ಗ್ರಹಿಸುವ ಕ್ರಮ ಒಂದಾದರೆ, ಅನುಭಾವದ ಒಳಗಣ್ಣಿನಿಂದ ಲೋಕಾನುಭವವನ್ನು ಮತ್ತಷ್ಟು ಸೂಕ್ಷ್ಮವಾಗಿ ಗ್ರಹಿಸುವುದು ಇನ್ನೊಂದು ಕ್ರಮ. ಬುದ್ಧದೇವ ಮತ್ತು ವಚನಕಾರರು ಈ ಎರಡು ಅಂಚುಗಳನ್ನು ನಿರಾಕರಿಸಿ ಮಧ್ಯಮ ಮಾರ್ಗಿಗಳಾಗಿ ಲೋಕವನ್ನು ಅತಿರೇಕಗಳ ಸೋಂಕಿಲ್ಲದೆ ಸಾವಧಾನವಾಗಿ ಅತ್ಯಂತ ಹೃದಯವಂತಿಕೆಯಿಂದ ಗ್ರಹಿಸಿದವರು.
ನಮ್ಮ ನಡುವಣ ಎಲ್ಲ ಬಗೆಯ ನಿರಾಶಾದಾಯಕ ಸಂಗತಿಗಳ ನಡುವೆಯೂ ನಾವು ಹೆಮ್ಮೆ ಪಟ್ಟುಕೊಳ್ಳುವಂತಹ ರಾಷ್ಟ್ರಪತಿಯನ್ನು ಅಪರೂಪಕ್ಕೆ ಪಡೆದಿದ್ದೇವೆ : ಅಂಬೇಡ್ಕರ್ ನೆನಪಿನ ದಿನದ ಆಚರಣೆಯಲ್ಲಿ (1992) ನಾವೆಲ್ಲ ತಲ್ಲೀನರಾಗಿದ್ದಾಗ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಅಯೋಧ್ಯೆಯಲ್ಲಿ ನಮ್ಮ ಮುಸ್ಲಿಂ ಬಂಧುಗಳ ಪ್ರಾರ್ಥನಾಮಂದಿರ ಉರುಳಿ ಬಿತ್ತು. ಆಗ ಉಪರಾಷ್ಟ್ರಪತಿಗಳಾಗಿದ್ದ ಶ್ರೀ ಕೆ. ಆರ್. ನಾರಾಯಣನ್ ಅವರು ಮರುದಿನ ಮುಂಜಾನೆಯೇ ತಮ್ಮ ರಾಜ್ಯಸಭೆಯ ಅಧ್ಯಕ್ಷ ಪೀಠದಿಂದ ಅತ್ಯಂತ ನೋವಿನ ದನಿಯಲ್ಲಿ ಹೇಳಿದರು : "ಹಿಂದೊಮ್ಮೆ ಮನುಷ್ಯ-ಮನುಷ್ಯರ ನಡುವಣ ಸೋದರತ್ವಕ್ಕೆ ಎಡೆಬಿಡದೆ ಹೆಣಗಿದ ಗಾಂದಿsೀಜಿಯವರನ್ನು ಕೊಂದ ಭಾರತೀಯರು ಜಗತ್ತಿನ ಎದುರು ತಲೆತಗ್ಗಿಸಿ ನಿಂತಿದ್ದೆವು; ಪ್ರಾರ್ಥನಾ ಮಂದಿರವನ್ನು ನಾಶಗೊಳಿಸಿದ ಹೀನ ಅಹಿಷ್ಣುಗಳಾಗಿ ನಾವು ಇನ್ನೊಮ್ಮೆ ಅದಕ್ಕಿಂತ ಹೆಚ್ಚಿನ ಅಪರಾದಿsಗಳಾಗಿದ್ದೇವೆ." ಉತ್ಕಲದಲ್ಲಿ ಕುಷ್ಟರೋಗಿಗಳ ಶುಶ್ರೂಷೆಯಲ್ಲಿ ನಿರತರಾಗಿದ್ದ ಪಾದ್ರಿಯನ್ನು ಕೊಂದ ಘಟನೆಯ ವಿವರ ತಿಳಿದಾಗ ಅವರು ಮಮ್ಮಲ ಮರುಗಿದರು. ಇದೀಗ ಭಾರತ ಸಂವಿಧಾನದ ತಿರುಳನ್ನು ನಾಶಪಡಿಸುವ ಸನ್ನಾಹಗಳು ಆರಂಭಗೊಳ್ಳುತ್ತಿರುವಂತೆ ಕಾಣುತ್ತಿವೆ. ಈ ಬಗೆಯ ವಿನಾಶಕಾರಿಯಾದ ಚಟುವಟಿಕೆಗಳಿಗೆ ಹೊರತಾಗಿ ನಾವೆಲ್ಲ ಮೈಯೆಲ್ಲಾ ಕಣ್ಣಾಗಿ ಪರಸ್ಪರ ಸ್ನೇಹ, ಸೋದರತ್ವ, ಪ್ರೀತಿ ಮತ್ತು ಗೌರವಗಳ ಹೊಸ ಸೃಜನಶೀಲ ಆಲೋಚನೆ ಮತ್ತು ಕ್ರಿಯೆಗಳಲ್ಲಿ ತೊಡಗಬೇಕಾಗಿದೆ.
ಒಬ್ಬ ನಿಜವಾದ ವೈಚಾರಿಕನು ಸಂತನ ತುಂಬು ಮನಸ್ಸನ್ನು, e್ಞÁನಿಯ, ಲೋಕಾನುಭವಿಯ ಒಳನೋಟಗಳನ್ನೂ ತಾಯಿಯ ಕಟ್ಟಕ್ಕರೆಯನ್ನೂ ಏಕಕಾಲದಲ್ಲಿ ಹೊಂದಿರುತ್ತಾನೆ. ಬುದ್ಧದೇವ, ಬಸವ, ಅಲ್ಲಮ, ಅಕ್ಕ, ಶರೀಫ, ಗಾಂದಿs, ಲೋಹಿಯಾ, ಕುವೆಂಪು ಮುಂತಾದವರೆಲ್ಲ ಈ ಬಗೆಯ ಮನಸಂಪನ್ನ ವೈಚಾರಿಕತೆಯ ಪ್ರೇಮಮೂರ್ತಿಗಳಾಗಿದ್ದಾರೆ. ಕೋಮುದ್ವೇಷದ ಹಾಲಾಹಲ ಒಂದೇ ಸಮನೆ ಉಕ್ಕುತ್ತಿರುವ ಇಂದಿನ ದಿನಗಳಲ್ಲಿ ಈ ದಾರ್ಶನಿಕರು ನಮ್ಮ ಕಣ್ತೆರಿಸಿ ಪಾರುಮಾಡಬಲ್ಲ ಪ್ರೀತಿಯ ಒಡನಾಡಿಗಳಾಗಿದ್ದಾರೆ.
• ಪ್ರೊ. ಕಾಳೇಗೌಡ ನಾಗವಾರ
1073, ಆರನೇ ಮುಖ್ಯ ರಸ್ತೆ, ಇ ಮತ್ತು ಎಫ್ó ಬ್ಲಾಕ್, ರಾಮಕೃಷ್ಣನಗರ,
ಮೈಸೂರು – 570 022; ದೂರವಾಣಿ : 9845497375
