ಗುರುವಾರ, ಜನವರಿ 23, 2014

ಗಾಂಧಿ ಆಗ್ಬೇಕಂದುಕೊಂಡಾಗ


ಗಾಂಧಿ ಆಗ್ಬೇಕಂದುಕೊಂಡಾಗ
(ಕವನ ಸಂಕಲನ)




ವೀರಣ್ಣ ಮಂಠಾಳಕರ್









ಪ್ರಕಾಶಕರು
ಹುವಪ್ನೋರ್ ಪ್ರಕಾಶನ, ಮಂಠಾಳ
ತಾ: ಬಸವಕಲ್ಯಾಣ, ಬೀದರ ಜಿಲ್ಲೆ-585419



ಲೇಖಕರು:          ವೀರಣ್ಣ ಮಂಠಾಳಕರ್

ಪುಟಗಳು:

ಪ್ರಥಮ ಮುದ್ರಣ:    2010, ಏಪ್ರಿಲ್

ಪ್ರತಿಗಳು:               1000

ಬೆಲೆ:                       60/. (ಆರವತ್ತು ರುಪಾಯಿಗಳು)

ಅಕ್ಷರ ಜೋಡಣೆ: ವೀರಣ್ಣ ಮಂಠಾಳಕರ್

ಮುದ್ರಣ: ವಿಶ್ವಾಸ ಪ್ರಿಂಟ್ಸ್, ಬೆಂಗಳೂರು








ಅರ್ಪಣೆ
ಅಕಾಲಿಕ ಮರಣಕ್ಕೆ ತುತ್ತಾಗಿ,
ಬದುಕೇನೆಂಬುದನ್ನು ಕೂಡ ಅರಿಯದ ಹೊತ್ತಿಗೆ
ಅನಾಥನನ್ನಾಗಿ ಮಾಡಿ ಹೋದ ತಂದೆಗೆ.
ಕೂಡಿ ಬಾಳುವ ಸಂಕಲ್ಪವನ್ನು ಮಾಡಿ,
ಕಣ್ಮರೆಯಾಗಿ ಹೋದ ಅಣ್ಣ ಹುವಪ್ಪನಿಗೆ,
ಕಣ್ಣೀರಿನ ಕಡಲಲ್ಲಿ ಮುಳುಗಿಸಿ,
ಬದುಕಿನ ಏರಿಳಿತವೆಂಬ
ಜೀವನದಿಯಲ್ಲಿ ಜೀವಿಸಲು ಕಲಿಸಿದ ಇಬ್ಬರಿಗೂ...
ಕೃತಿ ಅರ್ಪಣೆ...
ವೀರಣ್ಣ ಮಂಠಾಳಕರ್


ಬದುಕಿನ ಕೌದಿಗೆ ಕಾವ್ಯದ ಕಸೂತಿ

ಬದುಕಿದ್ದವರು ಬರೆಯಬಹುದು
ಬರೆದು ಬದುಕಬಹುದು

ವೀರಣ್ಣ ಮಂಠಾಳಕರ್ ಅವರಬದುಕು-ಬರಹಸಂಕಲನದ ಹಸ್ತಪ್ರತಿಯನ್ನು ಮುಂದಿಟ್ಟುಕೊಂಡು ಸಮಕಾಲೀನ ಕಾವ್ಯದ ಚಹರೆಯ ಬಗ್ಗೆ ಯೋಚಿಸುತ್ತಿರುವ ನನ್ನನ್ನು ಮೊದಲ ಓದಿಗೇ ಸೆಳೆದ ಸಾಲುಗಳಿವು. ‘ಬದುಕಿದ್ದವರು ಬರೆಯಬಹುದು/ ಬರೆದು ಬದುಕಬಹುದುಎನ್ನುವ ಸಾಲುಗಳಲ್ಲಿ ಆಶಾವಾದದ ಜೊತೆಗೆ ನಿರಾಶೆಯೂ ಇದೆಯಲ್ಲವೇ? ಬರವಣಿಗೆಗೆ ಬೇಕಾದ ಪ್ರಾಥಮಿಕ ಅಗತ್ಯಗಳಲ್ಲಿ ಮುಖ್ಯವಾದದ್ದುಜೀವಂತವಾಗಿರುವುದುಎನ್ನುವ ಮಾತಿನ ಹಿಂದೆ ಹಲವು ಅರ್ಥಗಳು ಇವೆಯೆಂದು ನನಗನ್ನಿಸುತ್ತಿದೆ. ಇಲ್ಲಿನ ಬದುಕು ದೇಹದ ಭೌತಿಕ ಅಸ್ತಿತ್ವಕ್ಕೆ ಸಂಬಂಧಿಸಿದುದಲ್ಲ; ಮಾನಸಿಕ ಜೀವಂತಿಕೆಗೆ ಸಂಬಂಧಿಸಿದ ಮಾತಿದು. ಹಾಗೆ ನೋಡಿದರೆ ಜೀವಂತ ಇರುವುದರಲ್ಲಿ ವಿಶೇಷವೇನೂ ಇಲ್ಲ. ನಾವು ಬದುಕುವ ರೀತಿಜೀವನಕ್ಕೆ ಅರ್ಥತುಂಬುತ್ತದೆ. ಬದುಕುವ ರೀತಿಯಲ್ಲಿ ಕಾವ್ಯವೂ ಒಂದು ಮಾರ್ಗ! ನಮ್ಮ ಬದುಕಿನ ರೀತಿ ಅರ್ಥಪೂರ್ಣ ಹಾಗೂ ಮಾನವೀಯವಾಗಿದ್ದಲ್ಲಿ ಕವಿತೆ ಜೀವಂತವಾಗಿರುತ್ತದೆ; ಇಲ್ಲವೇ ಅದು ಜೀವರಹಿತ ಸಾಲುಗಳ ಗುಚ್ಛವಾಗಿಬಿಡುತ್ತದೆ. ಇಂಥದೊಂದು ಸಾಧ್ಯತೆಯನ್ನು ಮಂಠಾಳಕರರ ಸಾಲುಗಳು ಧ್ವನಿಸುತ್ತಿರಬಹುದೇ?
ಬರೆದು ಬದುಕಬಹುದು ಎನ್ನುವ ಸಾಲಿನ ಸಾಧ್ಯತೆಯನ್ನು ಗಮನಿಸೋಣ. ಬರವಣಿಗೆಯ ಮೂಲಕ ಆರ್ಥಿಕವಾದ ಬದುಕನ್ನು ಕಾಣುವುದು ಪ್ರಸ್ತುತ ಕನ್ನಡದ ಸಂದರ್ಭದಲ್ಲಂತೂ ಅಸಾಧ್ಯ. ಹಾಗಾಗಿ, ಬರವಣಿಗೆಯೊಂದಿಗೆ ತಳುಕು ಹಾಕಿಕೊಂಡ ಇಲ್ಲಿನ ಬದುಕು ಭಾವಲೋಕಕ್ಕೆ ಸಂಬಂಧಿಸಿದ್ದು. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಸಾಹಿತ್ಯ ನೀಡಬಹುದಾದ ಪೌಷ್ಟಿಕಾಂಶಗಳಿಗೆ ಸಂಬಂಧಿಸಿದ್ದು. ಐಕಾನ್ಗಳೆಲ್ಲ ಹುಸಿಯಾಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯವೇ ನಮ್ಮಗಳ ಬದುಕಿಗೆ ದೀವಿಗೆಯಾದಬಹುದಾದ ಸಾಧ್ಯತೆಯೇ ಇಲ್ಲಿನಬರೆದು ಬದುಕಬಹುದು’. ( ಸಾಲನ್ನು ಓದಿ ಬದುಕಬಹುದು ಎಂದರೆ ಇನ್ನೂ ಚೆನ್ನಾಗಿರುತ್ತದೆ).
ಬದುಕಿದ್ದವರು ಬರೆಯಬಹುದು/ ಬರೆದು ಬದುಕಬಹುದುಎನ್ನುವ ಸಾಲುಗಳು ವೀರಣ್ಣನವರ ಒಟ್ಟಾರೆ ಕಾವ್ಯದ ಆಶಯದಂತೆಯೂ ನನಗೆ ಕಾಣಿಸುತ್ತದೆ. ಕನ್ನಡ ಸಾಹಿತ್ಯದ ಬೆಳೆಯಲ್ಲಿಂದು ಎದ್ದುಕಾಣುತ್ತಿರುವುದು ಕಾವ್ಯದ ಫಸಲು. ವೀರಣ್ಣನವರಂಥ ನೂರಾರು ಯುವಕರು ಕವಿತೆ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯವಾಗಿ, ಗ್ರಾಮೀಣ ಭಾಗದ ತರುಣ ತರುಣಿಯರು ಕಾವ್ಯದ ಕನಸು ಕಾಣುತ್ತಿದ್ದಾರೆ. ನನ್ನ ಗಮನಕ್ಕೆ ಬಂದಂತೆ ಇಂಥ ಬಹುತೇಕ ಯುವಕವಿಗಳ ಬದುಕು ನಾಳೆಯ ಬಗ್ಗೆ ಸ್ಪಷ್ಟ ಪರಿಕಲ್ಪನೆಯಿಲ್ಲದ ಅತಂತ್ರದ್ದು. ಇಂಥ ಸಂದಿಗ್ಧದಲ್ಲಿ ಇವರೆಲ್ಲರೂ ಕಾವ್ಯದ ಕನಸು ಕಾಣಲು ಸಾಧ್ಯವಾಗುತ್ತಿರುವುದು ನನಗೆ ಸೋಜಿಗದ ಸಂಗತಿಯೂ ಹೌದು, ಆನಂದದ ಸಂಗತಿಯೂ ಹೌದು. ಸಾಹಿತ್ಯ ಹೊಟ್ಟೆ ತುಂಬಿಸುವುದಿಲ್ಲ, ಆದರೆ ಮನಸ್ಸು ತುಂಬಿಸುತ್ತದೆ! ಅವಮಾನಗಳನ್ನು ಮೀರುವ, ಹಸಿವನ್ನು ಗೆಲ್ಲುವ, ಆದರ್ಶಗಳನ್ನು ಕನವರಿಸುವ, ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲೂ ನಾಳೆಯ ಬಗ್ಗೆ ಕನಸುಗಳನ್ನು ಉಳಿಸುವ ಮಾಧ್ಯಮವಾಗಿ ಸಾಹಿತ್ಯ-ಕಾವ್ಯ ಕನ್ನಡದ ಯುವಪೀಳಿಗೆಗೆ ಮುಖ್ಯವೆನ್ನಿಸುತ್ತಿದೆ. ಇದು ಆರೋಗ್ಯಕರ ಸಮಾಜದ ಲಕ್ಷಣವೆಂದು ನನ್ನ ನಂಬಿಕೆ.
ಹೊತ್ತಿನ ಸಾಹಿತ್ಯ ಮತ್ತು ಬದುಕುಗಳ ಸಂಬಂಧವನ್ನು ಪ್ರಸ್ತಾಪಿಸಲಿಕ್ಕೆ ಕಾರಣ, ನಂಟು ವೀರಣ್ಣನವರ ಕಾವ್ಯದ ಹಿನ್ನೆಲೆಯೂ ಆಗಿರುವುದು. ವೀರಣ್ಣನವರ ಪಾಲಿಗೆ ಕವಿತೆ ಎನ್ನುವುದು ತುಂಬು ಭರವಸೆಯ ವ್ಯವಸಾಯ. ಬದುಕಿನ ನೋವು ನಲಿವುಗಳಿಗೆ ಸುಲಭವಾಗಿ ಒದಗಿಬರುವ ಅಭಿವ್ಯಕ್ತಿ. ‘ಸುಲಭವಾಗಿಎನ್ನುವ ಪದವನ್ನು ನಾನಿಲ್ಲಿ ಉದ್ದೇಶಪೂರ್ವಕವಾಗಿ ಬಳಸುತ್ತಿದ್ದೇನೆ. ಏಕೆಂದರೆ ವೀರಣ್ಣನವರಿಗೆ ಕವಿತೆ ಎನ್ನುವುದು ಕಾಡುವ, ಕಾಡಿಸುವ ಸೃಜನಶೀಲ ಕ್ರಿಯೆಯಲ್ಲ. ಅವರ ಕವಿತೆ ಏಕಾಂತದ ಧ್ಯಾನವೂ ಆದಂತೆ ಕಾಣುತ್ತಿಲ್ಲ. ದೈನಿಕದ ಅಗತ್ಯಗಳಿಗೆ ಸರಾಗವಾಗಿ ಒದಗಿಬರುವ ದ್ರವ್ಯಗಳಂತೆ ವೀರಣ್ಣನವರಿಗೆ ಕಾವ್ಯ ಒದಗಿಬಂದಿದೆ, ಬರುತ್ತಿದೆ. ಕಾರಣದಿಂದಲೇ ಇಲ್ಲಿ ಬೌದ್ಧಿಕ ಸಂವಾದವನ್ನು ಕಾಣಲಾರೆವು. ಇಲ್ಲಿನದು ಭಾವನೆಗಳ ಮೆರವಣಿಗೆ.

ಮೇಲಿನ ಮಾತುಗಳನ್ನು ವೀರಣ್ಣನವರ ಕಾವ್ಯದ ಮಿತಿ ಎನ್ನುವ ದೃಷ್ಟಿಯಲ್ಲಿ ನಾನು ಹೇಳುತ್ತಿಲ್ಲ. ಅವರ ಕಾವ್ಯದ ಗ್ರಹಿಕೆಯ ದೃಷ್ಟಿಯಿಂದ ನನಗೆ ಕಾಣಿಸಿದ ಲಕ್ಷಣಗಳಿವು. ನಾನಿಲ್ಲಿ, ಕವಿತೆಯ ಶಿಲ್ಪ, ಮಹತ್ವಾಕಾಂಕ್ಷೆ, ಸಿದ್ಧಿಯ ಚೌಕಟ್ಟಿನಲ್ಲಿ ವೀರಣ್ಣನವರ ಕವಿತೆಗಳನ್ನು ನೋಡುತ್ತಿಲ್ಲ. ಹಾಗೆ ನೋಡುವುದಿಲ್ಲಿ ಸಾಧ್ಯವೂ ಇಲ್ಲ. ನನ್ನ ಪ್ರಯತ್ನ ಕವಿತೆಗಳ ಹಿಂದೆ ಇರಬಹುದಾದ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸಾಹಿತ್ಯದ ಮೂಲಕ ಇಂಥ ಮನಸ್ಸುಗಳಿಗೆ ದೊರೆಯುತ್ತಿರಬಹುದಾದ ನೆಮ್ಮದಿಯನ್ನು ಅರ್ಥಮಾಡಿಕೊಳ್ಳುವುದು.
ವೀರಣ್ಣನವರದು ಯಾವ ವಸ್ತುವಿನ ಮೇಲಾದರೂ ಕವಿತೆ ಕಟ್ಟುತ್ತೇನೆನ್ನುವ ಉತ್ಸಾಹ. ಪ್ರೇಮ, ಸಾವು, ಸ್ಫೂರ್ತಿ, ಸಂಗಾತಿ, ಮೌಲ್ಯಗಳು, ಗಾಂಧಿ, ರೈತನ ಸಂಕಷ್ಟಗಳು- ಹೀಗೆ ಎಲ್ಲ ವಸ್ತುಗಳಿಗೂ ಅವರು ಕವಿತೆಯ ಅಂಗಿ ತೊಡಿಸಬಲ್ಲರು. ಸಂದಿಗ್ಧತೆಯಿಲ್ಲದ ಅವರ ಕಾವ್ಯದಲ್ಲಿ ಚಿತ್ರಕ ಶಕ್ತಿಯೂ ಇದೆ. ‘ನೆನಪಿನ ಹೂಮಳೆಎನ್ನುವ ಕವಿತೆಯಲ್ಲಿನ ಗಮನಸೆಳೆಯುವ ಚಿತ್ರವೊಂದನ್ನು ನೋಡಿ-
ನಿನ್ನ ನೆನಪುಗಳೆಂದರೆ ಗೆಳತಿ
ಕಾಣದ ದೇವರನ್ನು ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ ವರವೊಂದು-
ಪಡೆದ ಖುಷಿ, ಸಂಭ್ರಮ.
ನನ್ನ ಕವಿತೆಗಳಿಗೆ ಮೂಲಪ್ರೇರಣೆಯೆಂದರೆಆಸೆ, ನಿರಾಸೆ, ಭಗ್ನಪ್ರೀತಿ, ಮುರಿದುಬಿದ್ದ ಕನಸು, ಬಡತನಎಂದು ಪಟ್ಟಿನೀಡುವ ಕವಿ, ಗಾಂಧಿಯ ಬಗ್ಗೆ ಬರೆದಿರುವುದು ಕುತೂಹಲಕರವಾಗಿದೆ. ‘ಗಾಂಧಿ ಆಗ್ಬೇಕಂದುಕೊಂಡಾಗ...’ ಎನ್ನುವ ಕವಿತೆ ಸಂಕಲನದ ಒಳ್ಳೆಯ ಕವಿತೆಗಳಲ್ಲೊಂದು. ಗಾಂಧಿ ಆಗುವ ಹಂಬಲವಿದ್ದರೂ, ಆಗುವ ಹಾದಿಯಲ್ಲಿನ ಕಷ್ಟ ಅವರನ್ನು ಕಂಗೆಡಿಸುತ್ತದೆ. ಗಾಂಧಿಯಂತೆ ತುಂಡುಬಟ್ಟೆ ತೊಟ್ಟರೆ ಜನ ಏನೆಲ್ಲ ಕಥೆಗಳನ್ನು ಕಟ್ಟಬಹುದು, ಗಾಂಧಿಯಂತೆ ಆಸರೆಗೆ ಕೋಲು ಹಿಡಿದರೆ ಅದು ಏನೆಲ್ಲ ಕೋಲಾಹಲಕ್ಕೆ ಕಾರಣವಾಗಬಹುದು, ದಪ್ಪ ಕನ್ನಡಕ ತೊಟ್ಟರೆ ಜನ ಕುರುಡನೆಂದೇ ತಿಳಿದು ಗುಂಡಿಡಬಹುದು- ಹೀಗೆ ಬೆಳೆಯುವ ಕವಿತೆ ಗಾಂಧಿ ನಮ್ಮಿಂದ ದೂರವಾಗುತ್ತಿರುವ ಬಗೆಯನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಗಾಂಧಿ ಆಗಬೇಕೆಂದುಕೊಂಡಾಗಲೆಲ್ಲ ಅವರನ್ನು ಕಾಣುವುದು ಹುತಾತ್ಮನಾಗುವ ಭಯ:

ಗಸ್ತು ತಿರುಗುತ್ತಾ, ಸತ್ಯ ಶೋಧನೆಗೆ
ಗುಂಡಿಟ್ಟು ಕೊಲ್ಲಲು, ಹುಡುಕಾಟ ನಡೆಸುತ್ತಾರೆಂಬ ಚಿಂತೆ!’
ಸತ್ಯಶೋಧನೆಯ ನೆಪದ ಗುಂಡುಗಳ ವೀರಣ್ಣನವರ ಭಯ ಹೊತ್ತಿನ ಎಲ್ಲ ಸೃಜನಶೀಲರದೂ ಅಲ್ಲವೇ? ಭಯದ ನಡುವೆಯೂ ಕವಿ, ‘ಆದರ್ಶವಾದಿಗಳೇ ಕೇಳಿಎಂದು ಕಟುವಾಸ್ತವವನ್ನು ಚಿತ್ರಿಸಲು ಹಿಂದೆಮುಂದೆ ನೋಡುವುದಿಲ್ಲ:
ಈಗೇನಿದ್ದರೂ... ಬಾಂಬು ಬಂದೂಕು ಮಾತನಾಡುತ್ತವೆ
ಗಾಂಜಾ ಅಫೀಮುಗಳಿಗೆ ಬೇಡಿಕೆ ಹೆಚ್ಚಾಗಿದೆ
ಒಡೆದ ಕನ್ನಡಿಯಲ್ಲಿಯೇ ಕಾಣಬೇಕಾಗಿದೆ
ನೀವು ಬಿಟ್ಟುಹೋದ ಆದರ್ಶ, ತತ್ವಗಳ ಕಾಣಿಕೆ.
ಬದುಕನ್ನು ಸುತ್ತುವರೆದ ಹಲವು ತಲ್ಲಣಗಳ ನಡುವೆಯೂ ಪ್ರೇಮದ ಮಕರಂದ ಕವಿಯಲ್ಲಿ ಉತ್ಸಾಹ ತುಂಬುತ್ತದೆ. ಪ್ರೇಮದ, ಪ್ರೇಮಿಯ ನೆನಪಾದಾಗಲೆಲ್ಲ ವೀರಣ್ಣನವರ ಕವಿ ಗೇಯತೆಯತ್ತ ವಾಲುತ್ತದೆ. ‘ನೆನಪುಗಳು ಮನಸ್ಸಿಗೆ ಮುದ ನೀಡುವ ಮಲ್ಲಿಗೆ ಕಂಪುಎನ್ನುವ ಕವಿ, ‘ಹರಿದು ಹೋದ ಬದುಕಿನ ಕೌದಿಯನ್ನು ಹೊಲಿ. ಬಾಎಂದು ಸಂಗಾತಿಯನ್ನು ಆಹ್ವಾನಿಸುತ್ತಾರೆ. ‘ನೀನಿಲ್ಲದಿದ್ದರೆ ನನ್ನ ಬಳಿ ನಾ ಹೇಗೆ ಬದುಕಲಿಎಂದು ಸಿನಿಮೀಯವಾಗಿ ಸಖಿಯನ್ನು ಓಲೈಸುತ್ತಾರೆ. ಇಂಥ ಅನುನಯದ ನಡುವೆಯೇ ವಿರಹದ ಬೇಗೆಯೂ, ಪ್ರೀತಿಯ ಕುರಿತ ಜಿಜ್ಞಾಸೆಗಳೂ ಅವರನ್ನು ಕಾಡುತ್ತವೆ.
ಹೊಸ ಕವಿತೆಯ ಸಂಸ್ಕøತಿಎನ್ನುವ ಕವನದಲ್ಲಿ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುತ್ತ ಕವಿತೆಯ ಕೊನೆಗೆ ಕವಿ ಹೇಳುತ್ತಾರೆ-
ಭಾವ ನೀನು, ಬಂಧನ ನಾನು
ಸವಿಯೋಣ ಬಾರೇ ಪ್ರೀತಿಯ ಹನಿಜೇನು
ಕೂಡಿಕೊಂಡು ಕಲಿಯೋಣ, ಬದುಕಿನ ಕೌದಿ
ಹೊಲಿಯುವ ಕಸೂತಿ; ಹೊಸೆದಂತೆ ಒಂದು
ಹೊಸ ಕವಿತೆಯ ಸಂಸ್ಕøತಿ.
ಪ್ರೇಮತುಡಿತದ ಕವಿತೆಯಲ್ಲಿ ಆಕಸ್ಮಿಕವಂತೆ ಬರುವಹೊಸ ಕವಿತೆಯ ಸಂಸ್ಕøತಿಎನ್ನುವ ಸಾಲು ಕುತೂಹಲ ಹುಟ್ಟಿಸುವಂತಿದೆ. ಬಹುಶಃ, ಎಲ್ಲ ಕಾಲದ ಕವಿತೆಯ ಹಂಬಲವೂ ಪರಂಪರೆಯ ಭಾಗವಾಗುವುದು, ಹಾಗೆ ಗುರ್ತಿಸಿಕೊಳ್ಳುತ್ತಲೇ ಹೊಸ ಜಾಡನ್ನು ಮೂಡಿಸುವುದು. ಹಂಬಲ ವೀರಣ್ಣನವರ ಕವಿತೆಯಲ್ಲಿ ಕಾಣಿಸಿಕೊಂಡಿರುವುದು ಅನಿರೀಕ್ಷಿತವಾಗಿರಬಹುದು. ಆದರೆ, ಮುಂದಿನ            ದಿನಗಳಲ್ಲಿ ಅವರಿಗದು ಅಪೇಕ್ಷಿತವಾಗಬೇಕು. ವ್ಯಕ್ತಿಯೊಬ್ಬನ ಬದುಕಿನಲ್ಲಿ ಕವಿತೆಯ ಸಂಭ್ರಮ ತುಂಬಾ ದಿನ ಉಳಿಯುವಂತಹದ್ದಲ್ಲ. ಸಂಭ್ರಮದ ಆಚೆಗಿನ ಅರ್ಥಸಾಧ್ಯತೆಗಳತ್ತ ಕವಿ ಸದಾ ಆಸೆಗಣ್ಣಾಗಿರಬೇಕು. ಅಂಥ ಆಸೆಗಣ್ಣು ಹಾಗೂ ಪ್ರಯತ್ನ ವೀರಣ್ಣನವರದೂ ಆಗಲಿ ಎನ್ನುವ ಆಶಯ ನನ್ನದು.
ವೀರಣ್ಣನವರ ಕವಿತೆಗಳ ಓದು ನನಗೆ ಖುಷಿಕೊಟ್ಟಿದೆ. ಅವರಿಗೆ ಎಲ್ಲ ಯಶಸ್ಸು ದೊರೆಯಲಿ ಎಂದು ಆಶಿಸುವೆ.

-ರಘುನಾಥ ..
ಸೆಪ್ಟೆಂಬರ್ 23, 2009




ನನ್ನ ನುಡಿ
ಕಾವ್ಯ ಕ್ಷೇತ್ರಕ್ಕೆ ಬರುವದಕ್ಕಿಂತ ಮುಂಚೆ ಪ್ರೀತಿಯಲ್ಲಿ ಸೋತರೂ, ಕವಿತೆಗಳನ್ನು ಗೀಚುವ ಗೀಳು ಕೊರತೆಯನ್ನು ಮರೆಸಿದೆ. ಪ್ರೀತಿಗಿಂತ ಹೆಚ್ಚಿನ ಸುಖ-ಸಂತೋಷ, ಅಷ್ಟೇ ನೆಮ್ಮದಿಯಾಗಿ, ಕಷ್ಟದಲ್ಲೂ ದು:ಖವನ್ನು ಮರೆತಿದ್ದೇನೆ. ಕಾವ್ಯವೆಂಬುದು ಪ್ರೇಯಸಿಗಿಂತ ಹೆಚ್ಚು ತೃಪ್ತಿಯನ್ನು ಕೊಡುತ್ತದೆ. ಕಾಮತೃಷೆಯಷ್ಟೇ ಸ್ಖಲನ! ಕವಿಯಾಗಿ, ಕವಿತೆಗಳನ್ನು ಬರೆದು ಮುಗಿಸಿದಾಗ ನಾನು ಅನುಭವಿಸಿದ್ದೇನೆ. ಹೀಗಾಗಿ ಅವಳಿಲ್ಲದ ನೋವು, ನಿವೇದನೆ ಕವಿತೆಗಳಲ್ಲಿ ಹೇಳಿಕೊಂಡಿದ್ದೇನೆ.
ಯಾರನ್ನೂ ಪ್ರೀತಿಸದೇ ಕವಿಯಾಗಲಾರ. ಎಂಬ ಮಾತಿಗೆ ನನ್ನ ಕಾವ್ಯ ಬದುಕು ಅದಕ್ಕೆ ನೆಪ ಅಷ್ಟೆ. 1999 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯವರುಕನ್ನಡ ಕಾವ್ಯ ಪರಂಪರೆ ಕಾವ್ಯ ಕಮ್ಮಟವನ್ನು ಏರ್ಪಡಿಸಿದ್ದರು. ಆಗ ಶಿವಮೊಗ್ಗದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದೆ. ಅಲ್ಲಿಂದ ನನ್ನ ಕಾವ್ಯಕ್ಕೆ ಒಂದು ರೀತಿ ಪಂಚ್ ಕೊಡಲು ಸಾಧ್ಯವಾಯಿತು. ಅಲ್ಲಿ ಹಲವು ಕವಿಗಳ, ಸಾಹಿತ್ಯಾಸಕ್ತರ ಪರಿಚಯವಾಯ್ತು. ಆಗತಾನೆ ಬರೆಯುತಿದ್ದ ಅನೇಕರು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದರು. ಸಂದರ್ಭದಲ್ಲಿ ಪತ್ರಕರ್ತ, ಸಾಹಿತಿಗಳಾದ ಮಹಿಪಾಲರೆಡ್ಡಿ ಮುನ್ನೂರು, ಕವಿ, ಕಥೆಗಾರ ಚಿದಾನಂದ ಸಾಲಿ ಸೇರಿದಂತೆ ಅನೇಕರು ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದರು. ನಂತರ ಇವರೊಂದಿಗೆ ನಿರಂತರ ಸಂಪರ್ಕ ಬೆಳೆಯಿತು.
ಬಡತನದಲ್ಲಿ ಹುಟ್ಟಿದರೂ ತಂದೆ-ತಾಯಿಯ ಪ್ರೀತಿ, ಅವರ ಆರೈಕೆ ಹೊಟ್ಟೆ ಬಟ್ಟೆಗೆ ಕೊರತೆ ಇಡಲಿಲ್ಲ. ತಂದೆ ಲಾರಿ ಚಾಲಕನಾಗಿ ದುಡಿದಿದ್ದಾರೆ. ದುಡ್ಡಿಗಿಂತ ಮಕ್ಕಳೇ ಸಂಪತ್ತು ಎಂದು ಬೆಳೆಸಿದವರು. ಆದರೆ ಅಪ್ಪ ಒಂದಿನ ಅನಾಥವಾಗಿ ಎಲ್ಲರನ್ನು ಬಿಟ್ಟು ಮರೆಯಾದರು.
ಹೊಟ್ಟೆ ಪಾಡಿಗಾಗಿ ಬೆಂಗಳೂರು, ಮುಂಬಯಿ, ಪುಣೆ ನಗರಗಳಲ್ಲಿ ಅಲೆಮಾರಿ ಜೀವನ ಸಾಗಿಸಿದೆ. ಕೆಲಕಾಲ ಲಾರಿ ಕ್ಲೀನರ್ ಆಗಿಯೂ ಜಿವನ ನಡೆಸಿ, ಒಂಟಿ ತಾಯಿಯ ಜೊತೆಯಾಗಿದ್ದೇನೆ. ಅಪ್ಪ ತಿರಿಕೊಂಡ ಮೂರು ವರ್ಷಕ್ಕೆ ಮದುವೆಯೆಂಬ ಬಂಧನದಲ್ಲಿ ಸಿಲುಕಿದೆ. ಜೀವನದಲ್ಲಿ ನೋವುಂಡು, ಯಶಸ್ಸಿನ ಪಯಣದಲ್ಲಿ ಸಾಗುತ್ತ, ಗೆಲುವಿಗಾಗಿ ಹೊಸ ಹೊಸ ದಾರಿಗಳನ್ನು ಹುಡುಕುತ್ತಾ, ಮುಂದೆ ಸಾಗಿರುವ ನನಗೆ ಎದುರಾಗಿದ್ದು? ಹಲವು ಸಂಕಷ್ಟಗಳು. ಇವುಗಳೇ ನನ್ನ ಮುಂದಿನ ಬದುಕಿಗೆ ಮುನ್ನುಡಿ, ಸೋಲಿನಲ್ಲೂ ಗೆಲುವುಂಟು ಎಂದು ಈಗಲೂ ನಂಬಿದ್ದೇನೆ. ಸೋತು ನೆಲ ಕಚ್ಚಿದರೂ ಕೂಡ ಮನದಾಳದಲ್ಲಿ ಅವಿತು ಕುಳಿತ, ನನಗೇ ಗೊತ್ತಿಲ್ಲದ ಅದೆಂಥದೋ ಶಕ್ತಿಯೊಂದು ಫುಟ್ಬಾಲಿನಂತೆ ಮತ್ತೆ ಮೇಲೆಬ್ಬಿಸಿತು.
ಗಾಂಧಿ ಆಗ್ಬೇಕಂದುಕೊಂಡಾಗಕವನ ಸಂಕಲನದಲ್ಲಿ ಒಟ್ಟು 39 ಕವಿತೆಗಳಿವೆ. ವಾಸ್ತವ ಬದುಕಿನ ನೋವುಗಳು ಇದರಲ್ಲಿ ಅಡಗಿವೆ. ಪ್ರೀತಿ-ಪ್ರೇಮದ ಪಿಸು ಮಾತುಗಳಿವೆ. ‘ಕವಿ ಗೋಪಾಲಕೃಷ್ಣ ಅಡಿಗರು ಹೇಳುವಂತೆ: ಕಾವ್ಯ ಎಂಬುದು ಜೀವನ್ಮರಣದ ಪ್ರಶ್ನೆಯಂತೆ ನನಗೂ ಕಾಡಿದ್ದುಂಟು. (ಹಸಿವೆಯ ಹಾಗೆ ಕಾವ್ಯ ವಸ್ತು. ದಾಹದ ಹಾಗೆ ಕೆಂಗೆಡಿಸುತ್ತಿರಬೇಕು. ಕಾಮದ ಹಾಗೆ ತಪಿಸುತ್ತಿರಬೇಕು. ಸಾವಿನಂತೆ ಮೋಹಿಸದೇ ಹೋದರೆ ಪದ್ಯ ಬರೆಯಬಾರದು.) ಅಂತಹ ಯಾವುದೇ ಸಂದರ್ಭಗಳನ್ನು ಇಲ್ಲದೇ ಬರೆಯಲು ನನಗೂ ಕೂಡ ಸಾಧ್ಯವಾಗಲಿಲ್ಲ ಅನಿಸುತ್ತದೆ. ಸಂಕಲನದಲ್ಲಿ ಸಾವಿನ ಕುರಿತಾದ ಎರಡ್ಮೂರು ಕವಿತೆಗಳು ಸಹ ಇವೆ. ಕವಿಯ ಆಶಯ, ತಲ್ಲಣ ಬದುಕಿನ ಬಗ್ಗೆ ಇರುವ ಕುತೂಹಲವನ್ನು ಕವಿತೆಗಳಲ್ಲಿ ಸಾಧ್ಯವಾದ ಮಟ್ಟಿಗೆ ಹಿಡಿದಿಟ್ಟಿರಬಹುದು ಅನಿಸುತ್ತದೆ.
ಗಾಂಧಿ ಆಗ್ಬೇಕಂದುಕೊಂಡಾಗ ಸಂಕಲನಕ್ಕೆ ಪ್ರಾರಂಭದಲ್ಲಿಬದುಕು-ಬರಹಎಂಬ ಶೀರ್ಷಿಕೆಯನ್ನು ಇಡಬೇಕೆಂದು ಬಯಸಿದ್ದೆ. ಕಾರಣ ಶೀರ್ಷಿಕೆಯಡಿಯಲ್ಲಿ ಒಂದು ಕವನ ಇರುವುದರಿಂದ ತರಹ ಯೋಚಿಸಿದ್ದೆ. ಆದರೆ ಸ್ನೇಹಿತರ ವರ್ಗದವರಲ್ಲಿ ಚರ್ಚಿಸಿದಾಗ ಬದುಕು ಬರಹ ಎಂದರೆ ನಮ್ಮ ಜೀವನ ಮತ್ತು ಬದುಕಿಗೆ ಸಂಬಂಧಿಸಿದ್ದಾಗಿದ್ದರೆ ಮಾತ್ರ ಅಂತಹ ಹೆಸರು ಸೂಕ್ತವೆನಿಸುತ್ತದೆ ಎಂದರು. ಸರಿಯೆಂದುಗಾಂಧಿ ಆಗ್ಬೇಕಂದುಕೊಂಡಾಗಎಂಬ ಮರು ನಾಮಕರಣ ಮಾಡಿದ್ದೇನೆ. ಮುಂಚೆ ಬದುಕು-ಬರಹ ಶಿರೋನಾಮೆ ಕೊಟ್ಟು, ಸಾಹಿತಿ, ವಿಮರ್ಶಕರಾದ ರಘುನಾಥ . ಅವರಿಂದ ಮುನ್ನುಡಿ ಬರೆಸಿದ್ದೇನೆ. ‘ಬದುಕು-ಬರಹಚೌಕಟ್ಟಿನಾಚೆಗೂ ವಿಮರ್ಶಿಸಿ, ಬರೆದಂಥ . ಅವರ ಮುನ್ನುಡಿಗೆ ಧಕ್ಕೆಯಾಗದಂತೆ ಎಥಾವತ್ತಾಗಿ ಪ್ರಕಟಿಸಲಾಗಿದೆ. ಓದುಗರಾದ ತಾವು ಗಲಿಬಿಲಿಗೊಳ್ಳದೇ ತಿದ್ದಿಕೊಂಡು ಓದಬೇಕೆಂದು ಬಯಸುತ್ತೇನೆ.
ಅಂತರಾಳದಿಂದ ಒಡಮೂಡಿದ ಕವಿತೆಗಳೇ ಕೃತಿಯಲ್ಲಿ ಸಂಕಲಿಸಿದ್ದೇನೆ ಎಂಬ ಆತ್ಮ ವಿಶ್ವಾಸದಿಂದ ಹೇಳಬಲ್ಲೆ. ನೋವು, ನಲಿವು, ಪ್ರಿತಿ-ಪ್ರೇಮದಲ್ಲಿ ಮಿಂದೆದ್ದ ಭಾವನೆಗಳ ಜೊತೆ ಜೊತೆಗೆ ಸಮಾಜದ ಭ್ರಷ್ಟಾಚಾರ, ಅನ್ಯಾಯ, ಶೋಷಣೆಗಳ ವಿರುದ್ಧವೂ ಕೆಲವು ಕವಿತೆಗಳಲ್ಲಿ ಧ್ವನಿಯೆತ್ತಿದ ಬಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎಷ್ಟರ ಮಟ್ಟಿಗೆ ನೀವಿದನ್ನು ಸ್ವೀಕರಿಸುತ್ತಿರೆಂದು ನಿಮ್ಮೊಳಗಿನ ಆಸಕ್ತಿ-ಅಭಿರುಚಿ, ಅಭಿಪ್ರಾಯ, ನಿಮ್ಮ ನಿರ್ಣಯಕ್ಕೆ ಬಿಟ್ಟಿರುತ್ತೇನೆ.
ಯಾವುದೇ ಶಕ್ತಿ ನಮ್ಮ ಹಿಂದೆ ಇದ್ದರೂ ಕೂಡ ಶೇ.99 ರಷ್ಟು ಪರಿಶ್ರಮ, ಸತತ ಓದು, ಅಧ್ಯಯನ ನಮ್ಮಲ್ಲಿ ಇದ್ದಾಗ ಮಾತ್ರ ಬೆನ್ನ ಹಿಂದಿನ ಬೆಳಕು ನಮ್ಮ ಮುಂದೆ ಬಂದು ನಿಲ್ಲಲು ಸಾಧ್ಯ ಎಂಬುದನ್ನು ನಂಬಿಕೊಂಡಿದ್ದೇನೆ. ಸಂಕಲನದಲ್ಲಿನ ಎಲ್ಲಾ ಕವಿತೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬರೆದಂಥವು. ಕವಿತೆಗಳು ತೀರಾ ಕಾಡಿ-ಬೇಡಿ ಹಸಿವಿನ ಹಾಗೆ ರಾತ್ರಿ ಹಗಲು ದಾಹ ಕೆಂಗೆಡಿಸುತ್ತಿರುವಾಗ ಬರೆದಂಥವು. ನನಗೆ ತುಂಬಾ ಇಷ್ಟವಾದಂಥವುಗಳನ್ನೇ ಸಂಕಲಿಸಿದ್ದೇನೆ.
ಸಂಕಲನಕ್ಕೆ ಮುನ್ನುಡಿ ಬರೆದು ಕೊಟ್ಟ ಖ್ಯಾತ ಚಿತ್ರ ವಿಮರ್ಶಕ, ಕಥೆಗಾರ, ಮಯೂರ ಪತ್ರಿಕೆಯ ಹಿರಿಯ ಉಪ ಸಂಪಾದಕರಾದ ರಘುನಾಥ . ನನ್ನೆಲ್ಲಾ ಪರಿಶ್ರಮಕ್ಕೆ ವಿಮರ್ಶೆಯೆಂಬ ಕನ್ನಡಿ ಹಿಡಿದಿದ್ದಾರೆ. ಅದರೊಳಗೆ ನನ್ನ ಕಾವ್ಯದಲ್ಲಿರುವ ಹೂರಣಕ್ಕೆ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು ಸಲ್ಲಿಸುತ್ತೇನೆ.
ಇದೇ ಸಂಕಲನಕ್ಕೆ ಬಸವಕಲ್ಯಾಣ ತಾಲೂಕಿನ ಪತ್ರಕರ್ತ ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಮಾಣಿಕ ಭುರೆಯವರು ನನ್ನ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಅವರಿಗೂ ಸಹ ಹೃದಯಂತರಾಳದ ಅಭಿನಂದನೆಗಳು. ನಡೆದಾಡುವ ದೇವರೆಂದೇ ಖ್ಯಾತರಾದ ಪೂಜ್ಯಶ್ರೀ ಚೆನ್ನವೀರ ಶಿವಾಚಾರ್ಯರು ಸುಕ್ಷೇತ್ರ ಹಾರಕೂಡ, ಇವರು ನನಗಾಗಿ ಆಶಿರ್ವದಿಸಿದ್ದಾರೆ. ಅದಕ್ಕಾಗಿ ಪೂಜ್ಯರಿಗೆ ತುಂಬು ಹೃದಯದಿಂದ ವಿನಮೃವಾಗಿ ವಂದಿಸುವೆ. ನಿಮ್ಮೆಲ್ಲರ ಅಭಿಪ್ರಾಯಕ್ಕೆ ಸದಾ ಸ್ವಾಗತಿಸುತ್ತಾ ಕೃತಿಯನ್ನು ಓದುವ ನಿಮಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲುತ್ತದೆ. ಪುಸ್ತಕವನ್ನು ಪ್ರಕಟಿಸಿದ ಹುವಪ್ನೋರ್ ಪ್ರಕಾಶನ ಮಂಠಾಳ ಸದಸ್ಯರಿಗೂ ಸದಾ ಚಿರ ಋಣಿಯಾಗಿರುವೆ.
ಗಾಂಧಿ ಆಗ್ಬೇಕಂದುಕೊಂಡಾಗಕವನ ಸಂಕಲನವು ನನ್ನ ಸ್ವರಚಿತ ಕವನಗಳಭಾವಾಂತರಂಗಮತ್ತುಸುಳಿಗಳುಸೇರಿದಂತೆ ಮೂರನೆಯ ಸಂಕಲನವಾಗಿರುತ್ತದೆ. 2003 ರಲ್ಲಿಹನಿಜೇನುಎಂಬ ಪ್ರಾತಿನಿಧಿಕ ಚುಟುಕು ಸಂಕಲನ ಪ್ರಕಟಿಸಿದ್ದೇನೆ. ಸಂಕಲ್ಪ ಎಂಬ ಸಾಹಿತ್ಯ ಮಾಸ ಪತ್ರಿಕೆ ಆರಂಭಿಸಿ ನಷ್ಟವನ್ನು ಅನುಭವಿಸಿದ್ದೇನೆ. ಆದರೆ ಒಂದೆಡೆ ತೃಪ್ತಿಯೂ ಕಂಡಿದ್ದೇನೆ. ‘ಗಾಂಧಿ ಆಗ್ಬೇಕಂದುಕೊಂಡಾಗಸಂಕಲನದಲ್ಲಿರುವ ಬಹುತೇಕ ಕವಿತೆಗಳು ಪ್ರಕಟಿಸಿದ ಕರ್ಮವೀರ, ಸಂಯುಕ್ತ ಕರ್ನಾಟಕ, ಹೊಸತು, ಆದರ್ಶ ಗಂಡ-ಹೆಂಡತಿ, ಮಾನಸ ಪತ್ರಿಕೆಗಳ ಸಂಪಾದಕರಿಗೆ ಕೃತಜ್ಞತೆಗಳು. ಕವನಗಳನ್ನು ಪ್ರಸಾರ ಮಾಡಿದ ಗುಲ್ಬರ್ಗಾ ಆಕಾಶವಾಣಿಯವರಿಗೂ ಅಭಿನಂದನೆಗಳು. ಮುದ್ರಿಸಿದ ವಿಶ್ವಾಸ ಪ್ರಿಂಟ್ಸ್ ಮಾಲೀಕರಾದ ಟಿ.ಎಲ್.ವೆಂಕಟೇಶ ಅವರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ಅಭಿನಂದಿಸುವೆ.
ಸಾಹಿತ್ಯವನ್ನು ಪ್ರೀತಿಸುತ್ತಾ ಬರೆಯುತ್ತಿರುವ ಎಲ್ಲಾ ಸ್ನೇಹಿತರಿಗೂ ಹಾಗೂ ನನ್ನೆಲ್ಲಾ ಆತ್ಮೀಯರಿಗೂ ಅಭಿನಂದನೆಗಳು.     ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ ಮರೆಯದೇ ಎಂದೆಂದಿಗೂ ನೆನೆಯುವೆ. ಕೃತಿಯನ್ನು ಕೊಂಡೋದುವ ನಿಮ್ಮೆಲ್ಲರಿಗೂ ಮೊದಲ ಓದಿಗೆ ಸ್ವಾಗತಿಸುತ್ತಾ ನಿಮ್ಮ ಮುಕ್ತ ಮನಸ್ಸಿನ ಅಭಿಪ್ರಾಯಕ್ಕಾಗಿ ಕಾದಿರುತ್ತೇನೆ.
ವೀರಣ್ಣ ಮಂಠಾಳಕರ್







ಪರಿವಿಡಿ
1)  ಗಾಂಧಿ ಆಗ್ಬೇಕಂದುಕೊಂಡಾಗ                                       01
2)  ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ                           02
3)  ಬದುಕು-ಬರಹ                                                                  03
4)  ದೂರವಿರು ಹತ್ತಿರ ಸುಳಿಯಬೇಡ                                      04
5)  ಸಾವು                                                                                05
6)  ನಾನು ಮತ್ತು ಸಾವು                                                         06
7)  ಸ್ಫೂರ್ತಿ                                                                             07
8) ಸಾವಿಲ್ಲದ ಮನೆ ಯಾರೂ ಕಟ್ಟಿಕೊಳ್ಳುವುದಿಲ್ಲ                  08
9)  ಸಾವೇ ಇಲ್ಲ ನಿನಗೆ                                                            09
10) ಆದರ್ಶವಾದಿಗಳೇ ಕೇಳಿ                                                 10
11) ನಾ ಹೇಗೆ ಬದುಕಲಿ                                                         11
12) ಮೋಹಕ ಚೆಲುವೆ                                                             12
13) ನೆನಪಿನ ಹೂಮಳೆ                                                           13
14) ಹೇಗೆ ಬದುಕಲಿ ಹೇಳು                                                     14
15) ನೋವು ನನಗಿರಲಿ                                                          15
16) ಹೊಸ ಕವಿತೆಯ ಸಂಸ್ಕøತಿ                                            16
17) ವಿರಹದಗ್ನಿಯಲ್ಲಿ ಉರಿದುರಿದು                                         17
18) ಪ್ರೀತಿಯೊಂದೇ ಸಾಕು                                                    18
19) ಪ್ರಿತಿಯೆಂದರೇನು ಗೆಳತಿ                                                 19
20) ಜೀವನ ಜೇನುಗೂಡಲ್ಲ                                                    20
21) ನತದೃಷ್ಟ ಹುಡುಗಿ                                                        21
22) ನೆನಪುಗಳೇ ಹೀಗೆ...                                                       22
23) ಕನಸಿನ ಹಂದರದಲ್ಲಿ                                                        23
24) ದೇವರಿಗೊಂದು ಮನವಿ                                                  24
25) ಯಾರವನು....?                                                              25
26) ಕಳೆದು ಹೋಗಿರುವೆ                                                        26
27) ಪುಸ್ತಕ ತತ್ವ-ಜೀವನ ಸತ್ತ್ವ                                              27
28) ಹೆತ್ತವಳು                                                                         28
29) ಬಂಧನ                                                                      29
30) ವಿಷ ಸರ್ಪದ ಮದ್ದು                                                          30
31) ಕಥೆಗಾರ ಶ್ರಿಕಾಂತ ಪಾಟೀಲ                                          31
32) ರೈತನೇ ಆಳರಸರ ದೊರೆ                                              32
33) ಕಳೆದು ಹೋದವರು                                                        33
34) ಚಿತ್ತ ಚಂಚಲೆ                                                                    34
35) ಕಸಬರಿಗೆ ಬೇಕಾಗಿದೆ                                                      35
36) ಗೆಳತಿ                                                                               36
37) ಬಹುಮಾನ                                                                      37
38 ಹಾಳೆಗಳು-ನಾಳೆಗಳು                                                     38
38) ಜೀವನ                                                                             39




ಗಾಂಧಿ ಆಗ್ಬೇಕಂದುಕೊಂಡಾಗ
ಗಾಂಧಿ ಆಗ್ಬೇಕಂದುಕೊಂಡಾಗ
ತುಂಡು ಬಟ್ಟೆಯಲ್ಲಿ ತಿರಗಾಡ್ಬೇಕಲ್ಲ
ಜನ ನನ್ನ ನೋಡಿ ಬೆತ್ತಲೆ ಕತೆ
ಕಟ್ಟುತ್ತಾರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ಕೋಲು ಹಿಡಿದು ತಿರಗಾಡ್ಬೇಕಲ್ಲ
ಕೋಲು ಕಂಡ ಜನ, ಕೋಲಾಹಲ
ಎಬ್ಬಿಸುವರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ಬೋಳು ತೆಲೆಯಲ್ಲಿ ತಿರಗಾಡ್ಬೇಕಲ್ಲ
ಬಿಸಿಲು ಧಗೆಯಲ್ಲಿ ಜನ, ಮೊಟ್ಟೆ ಬೇಯಿಸಿ
ಹೊಟ್ಟೆ ತುಂಬಿಸಿಕೊಳ್ಳುತ್ತಾರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ದಪ್ಪ ಕನ್ನಡಕ ಕಣ್ಣಿಗೆ ಹಚ್ಚಬೇಕಲ್ಲ
ಕನ್ನಡಕ ಕಂಡ ಜನ, ಕಣ್ ಕಾಣ್ಸೋದಿಲ್ಲಂತ
ತಿಳಿದು, ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತಾರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ನನ್ನ ಅಂಥಾವ್ರೆ ಜಗದ ತುಂಬೆಲ್ಲ
ಗಸ್ತು ತಿರುಗುತ್ತಾ, ಸತ್ಯ ಶೋಧನೆಗೆ
ಗುಂಡಿಟ್ಟು ಕೊಲ್ಲಲು, ಹುಡುಕಾಟ ನಡೆಸುತ್ತಾರೆಂಬ ಚಿಂತೆ!

ಹೊಸತುಮಾಸಿಕ ಪತ್ರಿಕೆಯಲ್ಲಿ ಪ್ರಕಟ

ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ
ಬುದ್ಧ, ಬಸವ, ಗಾಂಧೀಜಿಯವರ
ತತ್ತ್ವಗಳನ್ನು ಹೂತಿಟ್ಟಿದ್ದೇವೆ
ಕೇವಲ ಭಾಷಣ, ವೇದಿಕೆಗಳಲ್ಲಿ
ಮಾತ್ರ ತೆರೆದಿಟ್ಟಿದ್ದೇವೆ.

ಬುದ್ಧ ಜಯಂತಿ, ಬಸವ ಜಯಂತಿ
ಗಾಂಧಿ ಜಯಂತಿ ಕೇವಲ
ಪೂಜೆ ಪತ್ರಿಕೆಗಳಿಗಷ್ಟೇ ಸೀಮಿತವಾಗಿ
ಇಟ್ಟಿದ್ದೇವೆ, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ
ಮಾತಾಡುವವನಿಗಷ್ಟೇ ಮುಖ್ಯಸ್ಥನಾಗಿ ನೇಮಿಸಿದ್ದೇವೆ.

ನಾವು ನಮ್ಮ ಜಿವಿತಾವಧಿಯಲ್ಲಿ ಮಾಡಿದ
ಪಾಪ, ಕರ್ಮ, ಅನ್ಯಾಯದ ಹಗರಣಗಳು
ಬದಿಗಿಟ್ಟಿದ್ದೇವೆ.....
ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ
ಮಾಡಿ ಮಡಿದವರ ತ್ಯಾಗವನ್ನು ಹೊಗಳುತ್ತೇವೆ
ಸಮಯ ಬಂದಾಗ ಶಾಂತ ಮೂರ್ತಿಗಳಾಗುತ್ತೇವೆ

ಮುಖವಾಡ ಧರಿಸಿದವರು ನಾವು
ಅಪ್ಪಟ ಗಾಂಧಿವಾದಿಗಳಾಗುತ್ತೇವೆ
ಬುದ್ಧನ ಮಾರ್ಗವನ್ನು ಅನುಸರಿಸಿ
ಮುಗ್ಧ ಜನತೆಯ ಕಣ್ಣೆದುರಿಗೆ ಬೆಳಕ್ಕಾಗುತ್ತೇವೆ

ಬೆಳಕಿನ ಹಿಂದಿನ ಕತ್ತಲು
ಯಾರೆಂಬುದು ಪತ್ತೆ ಹಚ್ಚಲು ಬಂದವರನ್ನು
ಪ್ರಿತಿಯಿಂದಲೇ ಮುಗಿಸುತ್ತೇವೆ
ತಪ್ಪದೇ ಮಣ್ಣಿನಲ್ಲಿ ಮುಚ್ಚಿಟ್ಟು
ಸತ್ಯದ ಸಮಾಧಿಯನ್ನು ಕಟ್ಟುತ್ತೇವೆ

ಅದಕ್ಕಾಗಿಯೇ ಇಲ್ಲಿನ ರಾಜಕೀಯ
ಪ್ರಿತಿ, ತತ್ತ್ವ, ಆದರ್ಶಗಳನ್ನು ಕಂಡು
ಬುದ್ಧ, ಬಸವ, ಗಾಂಧೀಜಿಯವರು
ಭೂಮಿ ಮೇಲೆ ಮತ್ತೆ.....
ಹುಟ್ಟಿ ಬರುವುದನ್ನೇ ಮರೆತಿದ್ದಾರೆ.
ಸಮಾಧಿಯ ಮೇಲೆ ಹುಗುಚ್ಚವಿಟ್ಟವರ ಮೊಸಳೆ ಕಣ್ಣೀರಲ್ಲೇ ಕರಗುತ್ತಿದ್ದಾರೆ.

ಬದುಕು-ಬರಹ
ಬದುಕಿದ್ದವರು ಬರೆಯಬಹುದು
ಬರೆದು ಬದುಕಬಹುದು
ಬದುಕು-ಬರಹದ ನಡುವಿರುವ
ಅಂತರ: ಜೀವನ

ಜೀವನಕ್ಕಾಗಿ ನಾನು ಬದುಕಬೇಕು
ಬದುಕಿರುವತನಕ ಏನಾದರೂ
ಬರೆಯಲೇಬೇಕು.....
ಬರೆದದ್ದು ಅರ್ಥಪೂರ್ಣ
ಬದುಕಾಗಬೇಕು

ಹೇಳುತ್ತಾರೆ ಕೇಳುತ್ತಾರೆ
ನೂರಕ್ಕೆ ತೊಂಬತ್ತೊಂಬತ್ತು ಜನ
ಬರೆದು ಬದುಕಲಾಗದು;ಜೀವನಕ್ಕಾಗಿ
ಕೂಡಿಡಬೇಕು ಕೈ ತುಂಬಾ ಹಣ
ಆಗಲೇ ಜಿವನ ಸಂಭ್ರಮ

ಹೌದು....ಜೀವನ ಬಹಳ ವಿಚಿತ್ರ
ಬದುಕಲಿಕ್ಕಾಗಿ ಮುಖವಾಡ
ಹಾಕಿಕೊಳ್ಳಬೇಕು ನಿಜ ಜೀವನದಲ್ಲಿ
ಚಿತ್ರ-ವಿಚಿತ್ರವಾಗಿರಬೇಕು!

ಬದುಕಿದ್ದವರು ಬರೆಯಬಹುದು
ಬರೆದು ಬದುಕಬಹುದು
ಬರಹಗಾರ ಸತ್ತಾಗ?
ಬರಹ ಜೀವಂತ....
ಅವನು ಎಂದೆಂದಿಗೂ ಶಾಶ್ವತ
ಸತ್ತವನ ಸಮಾಧಿಯ ಮೇಲೆ
ನಗುತಿತ್ತು ಹೂಗುಚ್ಛ!

ಕರ್ಮವೀರ ವಾರ ಪತ್ರಿಕೆ: ಜೂನ್ 17, 2007


ದೂರವಿರು ಹತ್ತಿರ ಸುಳಿಯಬೇಡ
ದೂರವಿರು
ಹತ್ತಿರ ಸುಳಿಯಬೇಡ
ಮನಸ್ಸಿನ ಭಾವನೆಗೆ
ಸುಳಿಯಾಗಬೇಡ
ಮರೆತ ಮಾತು, ತೆರೆದ ಪುಟ ಆಗಬೇಡ
ನಿನ್ನ ಭರವಸೆಗಳಿಗೆ ನೊಂದಿರುವೆ
ಆರದ ಗಾಯದ ಮೇಲೆ ಬರೆಯಾಗಬೇಡ

ದೂರವಿರು ಹತ್ತಿರ ಸುಳಿಯಬೇಡ
ಕನಸಿನ ಕಣ್ಣಿನ ಸ್ವಪ್ನ ಸುಂದರಿಯಾಗಬೇಡ
ವಿಷ ಸರ್ಪ ನೀನು, ಗಾಳಿಯಂತೆ
ಸುಳಿಯಬೇಡ
ತಂಗಾಳಿ ಬೀಸಿ ಜ್ವಾಲಾ....
ಮುಖಿಯಂತೆ
ಮನಸ್ಸಿನಾಳಕ್ಕಿಳಿದು ಬೆಂಕಿ
ಹಚ್ಚಬೇಡ

ದೂರವಿರು ಹತ್ತಿರ
ಸುಳಿಯಬೇಡ
ನೀ ನನ್ನ ಬಾಳಿನ ಬತ್ತಿಯ
ಹಣತೆಯಾಗಬೇಡ
ನಿನ್ನಾ ಹಣತೆಯೊಳಗೆ ನನ್ನ
ರಕ್ತ ಸುರಿದು
ನನ್ನನ್ನೇ ಬತ್ತಿಯಾಗಿ ಹೊಸೆದು
ಬೆಳಕು ಕಾಣಬೇಡ
ಬೆಳಕಿನಡಿಯ ಕತ್ತಲು
ನೀನೆಂಬುದು ಮರೆಯಬೇಡ

ದೂರವಿರು ಹತ್ತಿರ ಸುಳಿಯಬೇಡ
ನಾ ಸತ್ತರೂ....ಸ್ಮಶಾನಕೊಯ್ಯಬೇಡ
ನನ್ನ ಶವದ ಸುತ್ತ ಕಣ್ಣೀರು ಸುರಿಸಬೇಡ
ಮತ್ತೆ ಶವದ ಬತ್ತಿ ಹೊಸೆದು
ಹಣತೆಯಾಗಬೇಡ
ನನ್ನ ಸುಟ್ಟ ರಕ್ತವೇ ಸುರಿದು
ದೀಪ ಹಚ್ಚಬೇಡ...!!
ಕರ್ಮವಿರ ವಾರ ಪತ್ರಿಕೆಯಲ್ಲಿ ಪ್ರಕಟ
ಸಾವು
ದಿನವೂ ಸತ್ತು ಬದುಕುತ್ತೇವೆ
ಏತಕ್ಕೆ....?
ಒಮ್ಮೆ ಹುಟ್ಟಿದ ಬಳಿಕ
ಸಾವೆಂಬುದು ಖಚಿತವಲ್ಲವೆ
ದೇಹಕ್ಕೆ

ಮತ್ಯಾಕೆ ಉಸಿರಾಟ
ಬದುಕು, ಮಲಗಿದಾಗ
ಭುಸುಗುಡುವ ಸಾವು...?

ಮೈಚಾಚಿ ಉದ್ದಕ್ಕೆ
ವಿವಿಧ ಭಂಗಿಗಳಲ್ಲಿ ನಾವು
ದಿನವಿಡೀ ದುಡಿದು
ದಣಿದ ದೇಹಕ್ಕೆ

ವಿಶ್ರಾಂತಿಯ ನೆಪವೊಡ್ಡಿ
ಜೋಗುಳವನ್ನು ಹಾಡಿ
ಮಲಗಿಸುವ ಸಾವಿಗೆ
ಮೆಚ್ಚಲೇಬೇಕು ಅದರ ಬುದ್ಧಿಗೆ

ಇರಬಹುದು ನಮಗೆಲ್ಲ
ಸಾವಿನ ಆಹ್ವಾನಕ್ಕೆ
ಎಚ್ಚರಿಕೆಯ ಕರೆಯೋಲೆ
ಇಣುಕಿ....ಇಣುಕಿ ನೋಡುವ
ಬೆಳಕು ಕತ್ತಲಿನ ನಡುವೆ
ಬಚ್ಚಿಟ್ಟುಕೊಂಡ ಸಾವೇ....

ಕರ್ಮವೀರ ವಾರಪತ್ರಿಕೆಯಲ್ಲಿ: ದಿ-ಜುಲೈ 29,2007


ನಾನು ಮತ್ತು ಸಾವು
ಕುಳಿತು ಮಾತಾಡುವ ಬಯಕೆ
ಒದಗಿ ಬಂದಾಗ
ದೇಹಕ್ಕೆ, ಉಸಿರಾಟಕ್ಕೆ

ಹೆದರಬೇಡ ಸಾವೇ
ನಿನ್ನ ಕುರಿತು
ಬರೆಯುತ್ತೇನೆಂದು
ಒಂದು ಕವಿತೆ
ಕೇಳು ಬಾ ಇಲ್ಲೊಂದಿಷ್ಟು
ನನ್ನ ಜೀವನದ ಕತೆ

ಯಾರು ನೀನು...?
ಅದೇಕೆ ಅಷ್ಟೊಂದು ಅಗೋಚರ
ವಿಸ್ಮಯ! ಭಯಂಕರ

ಬಾ ಕುಳಿತುಕೋ
ಮಾತು, ಕತೆ, ಚರ್ಚೆ, ಸಂವಾದ
ನಡೆಯಲಿ ನಮ್ಮಿಬ್ಬರ ನಡುವೆ
ಒಂದಿಷ್ಟು ಕಾಫಿ, ಚಹಾದ ಸ್ವಾದ
ಬಂದಂಥ ನೆಂಟರಿಷ್ಟರ ಮಧ್ಯೆ
ಬಂಧು-ಬಾಂಧವ್ಯದ ನಡುವೆ
ಏನೋ ವಾದ ವಿವಾದ?!

ನಾನೇನು ಮಹಾ ಕವಿಯಲ್ಲ
ಸಾಮಾನ್ಯ ಒಬ್ಬ ಮನುಜ
ಹುಟ್ಟುವಾಗಲೇ ನಿನ್ನೊಂದಿಗೆ ಬೆಳೆಯಿತು
ಗೆಳೆತನ ಸಹಜ; ನಮ್ಮಿಬ್ಬರದು
ಮುರಿಯದ ಬಂಧನವೆಂಬುದು ನಿಜ

ನನ್ನ ಕವಿತೆಗಳಿಗೆ ಮೂಲ ಪ್ರೇರಣೆಯೆಂದರೆ
ಆಸೆ, ನಿರಾಸೆ, ಭಗ್ನ ಪ್ರೀತಿ
ನಂತರ ವಸ್ತುಗಳಾಗಿಸಿಕೊಂಡಿದ್ದು?!
ಮುರಿದು ಬಿದ್ದ ಕನಸು, ಬಡತನ
ಶಾಶ್ವತ ನಮ್ಮಿಬ್ಬರದೇ ಗೆಳೆತನ

ಸ್ಫೂರ್ತಿ
ನಾ ನಿನಗೆ ಹಣತೆಯಾಗಬೇಕು
ಎಂದಿರುವೆ ಗೆಳತಿ, ಆದರೆ ಎಲ್ಲಿಂದ
ತರಲಿ ಎಣ್ಣೆ ಮತ್ತು ಬತ್ತಿ

ನಾ ನಿನಗೆ ಕೊಡೆಯಾಗಬೇಕು
ಎಂದಿರುವೆ ಗೆಳತಿ, ಆದರೆ
ಎಲ್ಲಿಂದ ತರಲಿ ಮುರಿದು ಬಿದ್ದ
ಕನಸಿನ ತಂತಿ

ನಾ ನಿನಗೆ ಬಿಳಿ ಹಾಳೆಯಾಗಬೇಕು
ಎಂದಿರುವೆ ಗೆಳತಿ, ಆದರೆ
ಹೇಗೆ ತುಂಬಲಿ ಭಾವನೆಗಳ ಸ್ಫೂರ್ತಿ

ನಾ ನಿನಗೆ ಕನಸಾಗಿರಬೇಕು
ಎಂದಿರುವೆ ಗೆಳತಿ, ಆದರೆ
ತೋರಲಿಲ್ಲ ನೀ ಒಂದಿಷ್ಟು ಖರೇ ಪ್ರೀತಿ

ನಾ ನಿನ್ನ ಬಾಳ ಪಯಣಕ್ಕೆ
ಹೂವಾಗಬೇಕು ಎಂದಿರುವೆ ಗೆಳತಿ
ಆದರೆ, ನೀನೀಗ ಆಗಿರುವೆ ಶ್ರೀಮತಿ

ಪ್ರೀತಿಗಾಗಿ ಬೇಕಿತ್ತು ನಿನ್ನ ಸಮ್ಮತಿ
ಆದರೆ ಕವಿತೆಗಲ್ಲ ಗೆಳತಿ
ಸಾಕಿಷ್ಟು ಇದ್ದರೆ ನಿನ್ನಿಂದ ಸ್ಫೂರ್ತಿ





ಸಾವಿಲ್ಲದ ಮನೆ ಯಾರೂ ಕಟ್ಟಿಕೊಳ್ಳುವುದಿಲ್ಲ
ನಾನು ಇಲ್ಲಿಗ್ಯಾಕೆ ಬಂದೆ
ಎಲ್ಲೆವನು ಅನಾಥವಾಗಿ ಬಿಟ್ಟು
ಹೋಗಿರುವ ತಂದೆ?

ಭೂಮಿ, ಪ್ರಕೃತಿ, ಪರಿಸರ
ಇಲ್ಲಿರುವ ಜನ ಎಷ್ಟೊಂದು ಅವಸರ
ಇರಬಹುದೆ ಎಲ್ಲವೂ ಮುಖವಾಡ ಚಿತ್ರ

ಬರುವಾಗ ಹೆತ್ತವ್ವಳಿಗೆ ನೊವು ಕೊಟ್ಟು ಬಂದೆ
ಇದಕ್ಕೆಲ್ಲ ಕಾರಣ ನನ್ನ ತಂದೆ
ನಾನು ಆಗಿರುವೆ ಒಬ್ಬ ಮಗನ ತಂದೆ

ಹುಟ್ಟಿಸಿದವನು ಇಲ್ಲಿ ಶಾಶ್ವತವಾಗಿ ಉಳಿಯಲಿಲ್ಲ
ಹುಟ್ಟಿರುವ ನನಗೂ ಬದುಕಲು ಬಿಡಲಿಲ್ಲ
ಬಾಳೊಂದು ಕಡಲಲ್ಲ: ಬರಿದಾದ ಭೂಮಿಯಂತೆ ನಾವೆಲ್ಲ

ದೇಹದೊಳಗೆ ಉಸಿರಾಟ ಇರೋತನಕ ಜೀವನ
ಎಲ್ಲವೂ ಮುಗಿದ ಬಳಿಕ ಬರೀ ಮೌನ
ಮನುಷ್ಯನ ಕೊನೆಯ ಆಸೆಯೆಂಬುದು ಸ್ಮಶಾನ

ಭೂಮಿಯಿಂದ ನಾನು ಅಗಲಿದ ಬಳಿಕ
ಮಾಡಿಕೊಳ್ಳುತ್ತಾರೆ ಇದ್ದವರು ಶುಚಿಯಾದ ಝಳಕ
ಕಳೆದು ಹೋಯಿತೆ? ಅವರ ಮೈಮೇಲಿನ ಮೈಲಿಗೆ ಮತ್ತು ಸೂತಕ!

ಅಗಲಿ ಹೋದವರು ಮತ್ತೆ ಮರಳಿ ಬರಲಿಲ್ಲ
ಇಲ್ಲಿದ್ದವರು ಯಾರೂ ಅಮರವಾಗಿ ಉಳಿಯಲಿಲ್ಲ
ಸಾವಿಲ್ಲದ ಮನೆ ಯಾರೊಬ್ಬರೂ ಕಟ್ಟಿಕೊಳ್ಳುವುದಿಲ್ಲ





ಸಾವೇ ಇಲ್ಲ ನಿನಗೆ
ನಿನಗ್ಯಾರು ಹೇಳಿದ್ದು
ನೀನಾಗಿಯೇ ಸಂತೋಷ, ಸಂಭ್ರಮದಲ್ಲಿ
ಸುಟ್ಟು, ಅನ್ಯರಿಗೆ ಕತ್ತಲಲ್ಲಿ ಬೆಳಕನ್ನು ಕೊಟ್ಟು
ನಿನ್ನ ದೇಹ ನೀನೇ ತ್ಯಾಗ ಮಾಡಿಕೋ
ಆತ್ಮಹತ್ಯೆ ಮಾಡಿಕೋ ಎಂಬುದು?

ನೀನೇಷ್ಟು ಶಾಂತ, ಚಿತ್ತ
ಬುದ್ಧನಷ್ಟೇ ಮುಗ್ಧ ನೀನು, ಮನಸ್ಸೇಷ್ಟು ಶುದ್ಧ
ನಿನ್ನಡಿಯಲ್ಲೇ ಕತ್ತಲಿದ್ದರೂ
ಅದೆಂಥ ಮೌನದಲ್ಲಿ ನೀ ಬೆಳಕು ಚೆಲ್ಲುವೆ
ಕತ್ತಲೆಂಬ ಭೂತಕ್ಕೆ ಇಲ್ಲದಂತೆ ಮಾಡುವೆ

ನಿನ್ನ ಉಪಕಾರವನ್ನು
ಯಾರಾದರೂ.....ಎಂದಾದರೂ, ಒಮ್ಮೆಯಾದರೂ
ಬಣ್ಣ ಬಣ್ಣದಲ್ಲಿ ಬಣ್ಣಿಸಿಯಾರೆ?
ಅವರಿಗವರೇ ಹೊಗಳಿಕೊಂಡರು
ನಿನ್ನ ಸಂಭ್ರಮ, ಸಂತೋಷವನ್ನೆಲ್ಲ
ಅವರೇ ಹಂಚಿಕೊಂಡರು.....!?

ನಿನ್ನ ಆಸೆ, ಕನಸು, ಗುರಿ ನಿರಂತರ
ಸಾವೇ ಇಲ್ಲ ನಿನಗೆ ಯುಗ ಯುಗಾಂತರ
ನಾವ್ಯಾರು ನಿನಗೆ ಸರಿಸಾಟಿ ಇಲ್ಲ
ನಿನ್ನಷ್ಟು ಧೈರ್ಯಶಾಲಿ; ಕತ್ತಲನ್ನು ಆಳುವ
ಅರಸರಲ್ಲ ನಾವು.


ಆದರ್ಶವಾದಿಗಳೇ ಕೇಳಿ
ಯಾರಿಗೆ ಬೇಕು ನಿಮ್ಮ ಆದರ್ಶ
ತತ್ವದ ಮಾರ್ಗಗಳು, ಈಗ
ಎಲ್ಲಿರುವರು ನಿಮ್ಮಂಥ ಗಾಂಧಿವಾದಿಗಳು
ಇದ್ದವರೆಲ್ಲ, ಭಾವಚಿತ್ರಗಳಾಗಿಯೇ ಹೋದರು

ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರು
ಬದುಕಿರುವತನಕ ಅವರನ್ನು
ಬಗ್ಗು ಬಡಿದವರು ನಾವೇ.....
ಗುಂಡಿಟ್ಟು ಕೊಂದು, ಕತ್ತಿ ಮಸೆದವರು ನಾವೇ

ನಿಮಗೆ ಪೂಜ್ಯ ಸ್ಥಾನದಲ್ಲಿಟ್ಟು
ಪೂಜಿಸುತ್ತಿರುವುದು ಹೆಸರಿಗೆ ಮಾತ್ರ
ಹಣ, ಅಧಿಕಾರ, ಆಸ್ತಿಗಾಗಿ
ಹರಾಜಿಗಿಟ್ಟಿದ್ದೇವೆ ನಿಮ್ಮೆಲ್ಲರ ಭಾವಚಿತ್ರ

ಈಗೇನಿದ್ದರೂ ಬಾಂಬು, ಬಂದೂಕು ಮಾತಾಡುತ್ತವೆ
ಗಾಂಜಾ ಆಫೀಮಗಳದ್ದೇ ಬೇಡಿಕೆ ಹೆಚ್ಚಾಗಿದೆ
ಒಡೆದ ಕನ್ನಡಿಯಲ್ಲಿಯೇ ಕಾಣಬೇಕಾಗಿದೆ
ನೀವು ಬಿಟ್ಟು ಹೋದ ಆದರ್ಶ-ತತ್ತ್ವಗಳ ಕಾಣಿಕೆ

ಮೋಹಕ ಚೆಲುವೆ ಚೆಲುವೆ
ಜೂಜಾಟದ ಸ್ಪರ್ಧೆಯೊಳಗೆ
ಛಲತೊಟ್ಟು ಗೆದ್ದು
ಸೊತವರೇಷ್ಟೋ ಜನ
ಲೆಕ್ಕ ಇಟ್ಟವರ್ಯಾರು?

ಕಿತ್ತೆಸೆದು ಬಿಡು, ಕೆಟ್ಟ ಚಾಳಿಗಾಗಿ
ತೊಟ್ಟ ಹಟದ ಛಲದ ಬೇರು
ನಿನ್ನ ಮಾದಕ ನೋಟದೊಳಗೆ
ಅಡಗಿ ಕುಳಿತ ಆಸೆ ಕನಸುಗಳಿಗೆ
ಮೊಟಕು ಗೊಳಿಸದಿರು

ಗೊತ್ತು ಗುರಿಯಿಲ್ಲದ ಬದುಕಿಗಾಗಿ
ಕುಳಿತು ಕೊರಗದಿರು
ಏಯ್....ಮೋಹಕ ಚೆಲುವೆಯೇ
ಸಿಗರೇಟು ಸೇದುತ್ತ
ನಶೆ ಏರಿದ ಗುಂಗಿನೊಳಗೆ
ನಿನ್ನರಿವು ನಿನಗಿಲ್ಲದೆ
ಮತ್ಯಾಕೆ ಯೋಚಿಸುತ್ತಿರುವೆ

ನಿನ್ನ ಬಿಚ್ಚು ಮನಸ್ಸಿನ
ತೆರೆದೆದೆ ಒಳಗೆ
ಕಚಗುಳಿ ಇಟ್ಟವರ್ಯಾರೋ
ಇರಬಹುದು, ಅದ್ಯಾರೋ...ಗೊತ್ತಾಗದೆ?

ಕ್ಲಬ್ಬು ಜೂಜಾಟವೆಲ್ಲ ಮರೆತು
ಬಾಳೆಂಬ ಪುಟಗಳನ್ನೊಮ್ಮೆ ತೆರೆದು
ಚಿಂತಿಸಿ ನೋಡು
ಸಂಸಾರವೆಂಬ ಚೌಕಟ್ಟಿನೊಳಗೆ
ಒಮ್ಮೆ ಹೆಜ್ಜೆಯನಿಡು
ಅಲ್ಲಿದೆ ಆದರ್ಶ ಬಾಳಿನ ಗುಟ್ಟು!!

ಆದರ್ಶ ಗಂಡ ಹೆಂಡತಿ ಪತ್ರಿಕೆಯಲ್ಲಿ ಬಹುಮಾನಿತ ಕವನ

ನೆನಪಿನ ಹೂಮಳೆ
ನಿನ್ನ ನೆನಪುಗಳೆಂದರೆ
ನನ್ನೀ ಎದೆಯ ಗೂಡಿನಲ್ಲಿ
ಚಿಲಿಪಿಲಿಗುಟ್ಟುವ ಹಕ್ಕಿಗಳ ಹಸಿವು

ನಿನ್ನ ನೆನಪುಗಳೆಂದರೆ ಗೆಳತಿ
ಕಾಣದ ದೇವರನ್ನು ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ ವರವೊಂದು
ಪಡೆದ ಖುಷಿ, ಸಂಭ್ರಮ

ನಿನ್ನ ನೆನಪುಗಳೆಂದರೆ
ಕಣ್ಗಳ ಬಿಂಬದಲ್ಲಿ
ಕಾಣುವ ಕನಸಿನ ಪಯಣ

ನಿನ್ನ ನೆನಪುಗಳೆಂದರೆ ಗೆಳತಿ
ಕವಿಯ ಭಾವ ತರಂಗದಲ್ಲಿ ತೇಲಾಡುವ
ಮನಸ್ಸಿನಂತರಂಗದ ವಿಚಿತ್ರ ಕಲ್ಪನೆಗಳು

ನಿನ್ನ ನೆನಪುಗಳೆಂದರೆ
ಮುಂಜಾನೆಯೆದ್ದು ನಸುನಕ್ಕು ನಾಚುತ್ತ
ಅಂಗಳದಲ್ಲಿ ರಂಗೋಲಿ ಹುಡುಗಿ

ನಿನ್ನ ನೆನಪುಗಳೆಂದರೆ ಗೆಳತಿ
ಕವಿತೆಯ ಜೀವ ಭಾವದಲ್ಲಿ
ಒಂದಾಗಿ, ನಿನಗಾಗಿರುವ ನನ್ನುಸಿರಿನ ಧ್ವನಿ

ನಿನ್ನ ನೆನಪುಗಳೆಂದರೆ
ದಡಮುಟ್ಟಿ ಹಿಂತಿರುಗಿ ಹೋಗುವ
ಅಲೆಗಳಂತೆ....ನಿನ್ನಾ ನೆನಪಿನ ಹೂಮಳೆ


ಹೇಗೆ ಬದುಕಲಿ ಹೇಳು
ಜೀವ, ಭಾವ ಬಂಧನದಲ್ಲಿ
ನೀ ಬರೀ ನೆನಪಲ್ಲ ಗೆಳತಿ
ನನ್ನೀ ಅಂತರಂಗದೊಳಗಿನ ಎದೆ ಬಡಿತ
ನಿತ್ಯದ ಬದುಕಿನ ಉಸಿರಾಟ, ಗಾಳಿ,ಬೆಳಕು ನೀನೆ

ಹೇಗೆ ಬದುಕಲಿ ಹೇಳು ನಿನಿಲ್ಲದೆ
ನಿನ್ನ ನೆನಪಿಲ್ಲದ ಕ್ಷಣವಿಲ್ಲ
ಶೂನ್ಯ ಜೀವನವಾಗುತ್ತದೆ ಬದುಕೆಲ್ಲ
ನಮ್ಮಿಬ್ಬರ ನಡುವೆ ಅದೇಕೆ ಅಂತರ?
ಅವನೊಬ್ಬನೇ ಬಲ್ಲ....

ಎಲ್ಲಾ ಬಗೆ ಬಗೆಯ ಭಾವ ತರಂಗಗಳು
ಚುಕ್ಕಿ, ಚಂದ್ರಮ, ನದಿ-ಸಾಗರಗಳು
ನಮ್ಮ ಕಲ್ಪನೆಗೂ ಮೀರಿ ಚಿಂತಿಸುತ್ತಿವೆ
ನಾವೀ ಜನ್ಮದಲ್ಲಿ ಅಲೆಗಳ ಹಾಗೆಯಾದರೂ
ಬಂದು ದಡ ಸೇರಬಹುದೆ? ಎಂದು











ನೋವು ನನಗಿರಲಿ
ನಾ ನೊಂದರೂ ನೀ
ನೋಯದಿರು ಗೆಳತಿ
ನನ್ನ ಮೇಲೆ ನಿನಗೆ ಪ್ರೀತಿ
ಇರಲಿ, ಇಲ್ಲದಿರಲಿ
ನಿನ್ನ ನೋವುಗಳೆಲ್ಲ ನನಗಿರಲಿ

ನನ್ನ ಮೇಲೆ ನಿನಗೆ
ದ್ವೇಷವಿದ್ದರೂ ಸರಿಯೇ
ಅದುವೇ ನನಗೆ ಬಹುಮಾನ

ನನ್ನ ಪ್ರಿತಿ-ವಿಶ್ವಾಸದ ಮೇಲೆ
ನಿನಗಿದ್ದರೆ ಅನುಮಾನ
ಕೊಂದು ಬಿಡು ಹೀಗೆ; ಒಮ್ಮೆ ಸುಮ್ಮನೆ
ನಾ ಸತ್ತ ಬಳಿಕ, ಸಮಾಧಿಯ ಮೇಲೆ
ನೀನರ್ಪಿಸುವ ಹೂಗುಚ್ಛವೇ
ನನಗೆ ಪ್ರೇಮದ ಅರಮನೆ

ನಾ ಹೇಗೆ ಬದುಕಲಿ
ನಿನಗಾದ ನೊವು ನನಗಲ್ಲವೆ
ನೀ ಮುಡಿದ ಹೂ ನಾನಲ್ಲವೆ
ಗೆಳತಿ, ಪ್ರೇಯಸಿ, ಹೆಂಡತಿ
ನನ್ನ ಮುದ್ದು ನಲ್ಲೆ ರಂಜಿ...ನೀನಲ್ಲವೆ?

ಹರಿದು ಹೋದ ಬದುಕಿನ ಕೌದಿಗೆ
ಟಿಗಳು, ಹಚ್ಚಿ ಹೊಲಿಯುವ ಸೂಜಿ
ನೀನಾಗು...ಬಾ ಸತಿ, ಸಂಗಾತಿ
ನನ್ನ ತಪ್ಪು ಹೆಜ್ಜೆಗೆ ಮುಳ್ಳಾಗು
ಬದುಕುವ ಮಾರ್ಗಕ್ಕೆ ಗುರಿಯಾಗು

ಸಾವಿರ ಗುಡ್ಡವೇ ಎದುರಾಗಲಿ
ಸಾವಿನ ನೆರಳೇ ಹಿಂಬಾಲಿಸಲಿ
ನೀನಿಲ್ಲದಿದ್ದರೆ ನನ್ನ ಬಳಿ
ಹೇಳು ನಾ ಹೇಗೆ ಬದುಕಲಿ

ಹೊಸ ಕವಿತೆಯ ಸಂಸ್ಕøತಿ
ಗೆಳತಿ ನಿನ್ ಪ್ರೀತಿಗಾಗಿ
ಹಾತೊರೆಯುತ್ತಿದೆ ನನ್ನ ಹುಚ್ಚು ಮನಸ್ಸು
ಸೆಳೆಯುತ್ತಿದೆ ನಿನ್ನ ಕಣ್ಣ್ನೋಟವೊಂದು
ಮುಚ್ಚಿಟ್ಟುಕೊಂಡ ಹರೆಯದ ನಿನ್ನಾ ವಯಸ್ಸು

ಪ್ರೀತಿಯೆಂದರೆ ನಿನ್ನೊಳಗಿನ ಭೀತಿ ಬಿಡು
ಒಂದಿಷ್ಟು ಖರೇ ಪ್ರೀತಿ ಅಂದ್ರ....?
ನಿನ್ನ ಮನಸ್ಸು ಕೊಡು

ಕನಸಿನ ಹಂದರದಲ್ಲಿ ನೀ ಬಿಡಿಸಿದಂತೆ
ಚಿತ್ತ-ಚಿತ್ತಾರದ ರಂಗೋಲಿ
ನನ್ನ ಮನಸ್ಸಿನ ಅಂಗಳದಲ್ಲೂ ಹಾಗೆ
ನಗು-ನಗುತ್ತಲೇ ಬಂದಿಳಿ....

ಅದೇಕೋ ಇಂದು; ಬಿಂದುವಿನೊಳಗಿನ ಸಿಂಧು
ನಿನ್ನ ನೆನಪಿನ ಸುಳಿಯಲ್ಲಿ ಇಣುಕಿ ನೋಡುತ್ತಿದೆ
ಭಾವಾಂತರಂಗದ, ಕಾವ್ಯ ಬಂಧ
ಭಾವವಿಲ್ಲದ ಬಂಧನವೇತಕ್ಕೆಂದು ಕೇಳುತ್ತಿದೆ
ಅದೇಷ್ಟು ಛಂದ....!

ಭಾವ ನೀನು, ಬಂಧನ ನಾನು
ಸವಿಯೋಣ ಬಾರೇ ಪ್ರಿತಿಯ ಹನಿಜೇನು
ಕೂಡಿಕೊಂಡು ಕಲಿಯೋಣ, ಬದುಕಿನ ಕೌದಿ
ಹೊಲಿಯುವ ಕಸೂತಿ; ಹೊಸೆದಂತೆ ಒಂದು
ಹೊಸ ಕವಿತೆಯ ಸಂಸ್ಕøತಿ

ವಿರಹದಗ್ನಿಯಲ್ಲಿ ಉರಿದುರಿದು
ಬದುಕು ವಿರಹದಗ್ನಿಯಲ್ಲಿ
ಉರಿದುರಿದು.....
ತಡಪಡಿಸುವ ಜೀವ
ಬದುಕಬೇಕು ಎಂಬ ದಾಹ

ಹುಟ್ಟು ಸಾವಿನ ನಡುವೆ
ಬಂದು ಹೋಗುವ
ವಿಧಿಯಾಟದ ಪಾತ್ರ
ದಟ್ಟ ಕರಿನೆರಳಾಗಿ
ಬಂದು ನಿಲ್ಲುವ ಭಿತ್ತಿ ಚಿತ್ರ!

ಆಸೆ ಆಕಾಂಕ್ಷೆ ಬಯಕೆಗಳು
ಕನಸುಗಳಾಗಿ ರೂಪುಗೊಳ್ಳುವ-
ಹೊತ್ತಿಗೆ, ಹೊತ್ತು ಗೊತ್ತಿಲ್ಲದೇ
ಸುಡುವ ಸೂರ್ಯನ ನೆತ್ತಿಗೇರಿ
ಕುಳಿತಾಗ....?

ಸೂರ್ಯನೊಂದಿಗೆ ಸರಸ
ಆಡುವ ಸಮಯ, ಛಲವಿಟ್ಟು
ಗೆದ್ದು ಬರುವೇನೆಂಬ ಭ್ರಮೆಯಲ್ಲಿ
ತೇಲಾಡುವ ಪ್ರಾಯ!

ಪ್ರೀತಿಯೊಂದೇ ಸಾಕು
ಸಾವಿರಾರು
ಶತ ಪ್ರಯತ್ನ ಮಾಡಿದೆ
ನೋವು ಮರೆಯಲೆಂದು
ಬಿಡುವಿಲ್ಲದ ಜಗತ್ತು
ಮಾರಕಾಸ್ತ್ರಗಳು ಹೊತ್ತು
ಪಡೆದುಕೊಂಡಿದೆ
ನನ್ನನ್ನು ಮುಗಿಸಲೆಂಬ ಶಪತ್ತು

ನನಗೆ ಅಡಂಬರದ ಜೀವನ ಬೇಕಿಲ್ಲ
ಕೇವಲ ಪ್ರೀತಿಯೊಂದೇ ಸಾಕು
ಬದುಕುವ ಆಸೆ, ಗುರಿ ನನಗಿಲ್ಲ
ಹೀಗೆ ಸುಮ್ಮನೆ ಬಂದಿರುವೆ
ನನ್ನ ಭವಿಷ್ಯವನ್ನು ಅರಿಯಲು

ಮನಸ್ಸಿದ್ದರೆ ಒಮ್ಮೆ
ದಿನ ನನ್ನ ಮೇಲೆ
ಮನ ತೃಪ್ತಿ ಆಗುವಷ್ಟು ನಕ್ಕು ಬಿಡಿ
ಆದರೆ....
ನಾಳೆ ಎಂಬ ದಿನಗಳಲ್ಲಿ
ಅತ್ತು ಬಿಡಲು, ನನ್ನ ಹಾಗೆ
ಮಾರ್ಗಗಳನ್ನು ಹುಡುಕುವಿರಿ

ಪ್ರಿತಿಯೆಂದರೇನು ಗೆಳತಿ
ಕಣ್ಣಿನಿಂದ ನೋಡದೆ
ಹೃದಯದಲ್ಲಿ ಸೇರಿಕೊಳ್ಳುವ
ನೆನಪುಗಳು ಪ್ರೀತಿಯೇನು ಗೆಳತಿ

ಅಂತರಂಗವೆಂಬ ನೋಟದಿಂದ
ಕಾಣುವ ವೈಭವ
ಸ್ಪರ್ಶದ ಅನುಭವ
ಪ್ರೀತಿಯೇನು ಗೆಳತಿ....?

ಹೇಳು ಪ್ರಿತಿಯೆಂದರೇನು
ಮೊಬೈಲ್ನಿಂದ....ಮೊಬೈಲ್ಗೆ ಬಂದ
ಮಿಸ್ಡ್ ಕಾಲ್! ಒಂದು ಪುಟ್ಟ ಸಂದೇಶ
ಗೊತ್ತು ಪರಿಚಯವಿಲ್ಲದವರು ಕಳುಹಿಸಿದಾಗ
ಪ್ರೀತಿಯೇನು ಗೆಳತಿ....?

ನೂರು ಭಾವ ಪ್ರತಿಬಿಂಬಿಸುವ
ಒಂದು ಸಾಲಿನ ಪುಟ್ಟ ಸಂದೇಶ
ಸೃಷ್ಠಿಸುವ ಅವಾಂತರ ಪ್ರೀತಿಯೇನು ಗೆಳತಿ!









ಜೀವನ ಜೇನುಗೂಡಲ್ಲ
ಜೀವನ ಜೇನುಗೂಡಲ್ಲ
ಎಲ್ಲೆಡೆಯ ಸುಗಂಧ ಹೀರಿ
ಗೂಡು ಕಟ್ಟುವ ದುಂಬಿಗಳು ನಾವಲ್ಲ

ಹಾರುವ ಹಕ್ಕಿ
ಹರಿಯುವ ನದಿ
ಬೀಸುವ ಗಾಳಿಗೆ
ಅಡ್ಡಗೋಡೆ ಕಟ್ಟುವವರು ನಾವು

ನಮ್ಮದು ನಮ್ಮವರೆಂಬುದು
ಬರೀ ನಾಟಕ, ದೊಂಬರಾಟ
ಸ್ವಾರ್ಥಕ್ಕಾಗಿ ನಡೆಸುವ
ಅಧಿಕಾರಕ್ಕಾಗಿ ಬಳಸುವ ಹಸುವಿನ
ಮುಖವಾಡದ ಹುಲಿಯಾಟ....!!

ಜೀವನ ಜೇನುಗೂಡಲ್ಲ
ಗೂಡಲ್ಲಿ ಜೇನು ರಸ ಉಳಿದಿಲ್ಲ
ವಿರಸ, ವೈಸಮ್ಯ, ದ್ವೇಷ, ವೈರಾಗ್ಯ
ಮನಸ್ಸೆಂಬ ಗೂಡಿನಲ್ಲಿ ಹೊಟ್ಟೆಕಿಚ್ಚು
ಹೆಚ್ಚುತ್ತಿದೆ ಅನಾರೋಗ್ಯ

ನತದೃಷ್ಟ ಹುಡುಗಿ
ನತದೃಷ್ಟ ಹುಡುಗಿ
ಏನೂ ಅರಿಯದ ಮುಗ್ಧೆ
ಅಂತೂ..... ಅಲ್ಲ
ಮುಗ್ಧೆಯನ್ನಾಗಿ ಮಾಡಿದ್ದಾರೆ ಅವಳನ್ನು

ನತದೃಷ್ಟ ಹುಡುಗಿ
ನಿನ್ನೆಯತನಕ ಇದೇ ನಗರದಲ್ಲಿ
ಜನಗಳ ಕಾಲ್ತುಳಿದಲ್ಲಿ
ಹಸಿವಿನಿಂದ ನರಳುತಿದ್ದಳು

ರಸ್ತೆ ಮಧ್ಯೆದಲ್ಲಿ ಇಂದು
ಅವಳ ಹಸಿದ ಹೊಟ್ಟೆ ತುಂಬಿಕೊಂಡಿದೆ
ಕಾಮದಾಹಿ ಜನಗಳ ಬಾಹು ಬಂಧನದಿಂದ

ನತದೃಷ್ಟ ಹುಡುಗಿ
ಹಸಿವಿನ ಹಾಹಾಕಾರದಲ್ಲಿ
ತಡಪಡಿಸುತ್ತಿರುವಾಗ
ಮನ ಬಂದಂತೆ ಕುಣಿಸಿ, ತಣಿಸಿದರು
ನಾವು ಮೂಕ ಪ್ರೇಕ್ಷಕರಾಗಿ
ನಿಂತಿರುವುದಷ್ಟೇ ಸತ್ಯ!

ಈಗ ಯಾವುದೇ ಚಂಡಮಾರುತದ
ಸುನಾಮಿ ಅಲೆಗಳಂಥ ಹೊಡೆತಕ್ಕೂ
ಜಗ್ಗುವುದಿಲ್ಲ ಅವಳು....ಹೇಗೋ
ಅವಳ ಜೀವನ ಸುಖಾಂತ,
ನಿಂತ ನೀರಾಗಿ ಜೀವಂತವಾಗಿ ಉಳಿದಿದೆ

ಅವಳ ಮೇಲೆ ನೇರದೃಷ್ಟಿ; ಬಹಳ ಹೊತ್ತು
ಬಿರುತ್ತೇವೆ ಹೊರತು
ಕೈ ಎತ್ತಿ ಹೇಳುವುದಿಲ್ಲ ನಾವು
ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿರುವುದಕ್ಕೆ
ಅನುಮಾನವೇ ಇಲ್ಲ.... ಕಾರಣ?
ಇದಕ್ಕೆ ಸಾಕ್ಷಿ ನತದೃಷ್ಟ ಹುಡುಗಿ

ನೆನಪುಗಳೇ ಹೀಗೆ...
ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಕಾಲು ಕೆದರಿ ಕಾಳಗಕ್ಕಿಳಿಯುವ
ಗೂಳಿಯಂತೆ!

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಮೌನ ಮಾತುಗಳ ಮಧ್ಯೆ
ಬಂದು ಹೋಗುವ
ಬಂಧುಗಳಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಸುತ್ತಿ ಬಳಸಿ ಬರುವ
ಝೇಂಕರಿಸುವ ದುಂಬಿಗಳಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಮನಸ್ಸಿಗೆ ಮುದ ನೀಡುವ
ಮಲ್ಲಿಗೆಯ ಕಂಪು ಬೀರುವಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ನಡೆದಾಡುವ ದಾರಿಯುದ್ದಕ್ಕೂ
ಯಾರ್ಯಾರದೋ ನೆರಳುಗಳು
ಹಿಂಬಾಲಿಸುವಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಅನೇಕ ಗೊಂದಲಗಳ ನಡುವೆ
ಸದ್ದುಗದ್ದಲವಿಲ್ಲದೆ ಕೊರೆಯುವ
ಚಿಂತೆ?

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಸದಾ ನನ್ನ ಜೊತೆಗಿರುವ
ನನ್ನದೆ ನೆರಳಿನಂತೆ....?!

ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟ; 01-02-2004

ಕನಸಿನ ಹಂದರದಲ್ಲಿ
ನಿನ್ನ ಪ್ರೀತಿಗಾಗಿ ಹಾತೊರೆದ ಮನಸ್ಸು
ಸೆಳೆಯಿತು ಗೆಳತಿ....
ಗುಟ್ಟಾಗಿ ನಿನ್ನಾ ವಯಸ್ಸು

ಪ್ರೀತಿಯೆಂಬುದು ಅದೇಷ್ಟು ಸೊಗಸು
ಒಂದಿಷ್ಟು ಕೋಪ, ಹುಸಿ ಮುನಿಸು
ಬೆಚ್ಚನೆಯ ಭಾವನೆಗಳಲ್ಲಿ ಕನಸು

ಕನಸಿನ ಹಂದರದಲ್ಲಿ ನೀ
ಬಿಡಿಸಿದ ರಂಗೋಲಿ
ಚಿತ್ತ-ಚಿತ್ತಾರದ ಹಾಡಿಗೆ
ಸುವ್ವಿ-ಸುವ್ವಾಲಿ: ನಾಟ್ಯ ಮಯೂರಿ

ರಾಗ ರಂಗಿನ ಹುಡುಗಿ
ನಿನ್ನ ವಯ್ಯಾರದ ಉಡುಪು
ಬಚ್ಚಿಟ್ಟುಕೊಂಡ ಯೌವ್ವನಕ್ಕೆ ಹೊಳಪು

ಭಾವ ಬಿಂಬದೊಳಗೆ
ರಾಗ-ಅನುರಾಗಕ್ಕೆ
ಕೆಂಪೇರಿತು ಕನ್ಯೆ; ನಿನ್ನ ಕೆನ್ನೆ!

ನಾಚಿಕೆ ಮಡಿವಂತಿಕೆ
ಪ್ರೀತಿಗೇಕೆ ಇರಬೇಕು
ಸುಖ ಸಂಪತ್ತು ಎಂಬುದಿದ್ದರೆ
ಅದು, ನಿನ್ನಲ್ಲೇ ಹುಡುಕಬೇಕು

ಕೂಡಿ ನಲಿಯುವ ಬಾಳು ನಮ್ಮದು
ಹಾಡಿ ಕುಣಿಯುವ ಆಸೆ ತೀರದು
ಹೆಣ್ಣು-ಗಂಡಿನ ಮೋಹವೇ ಅಂತದ್ದು.

ದೇವರಿಗೊಂದು ಮನವಿ
ಜೀವನ ಎಷ್ಟು ವಿಚಿತ್ರ
ಹಾಕಿಕೊಳ್ಳಬೇಕು ಬದುಕಲು
ಮುಖವಾಡಗಳ ಚಿತ್ರ

ಉದ್ಯೋಗ ನಿರುದ್ಯೋಗ
ಇವುಗಳ ನಡುವೆ
ಹೆಂಡತಿ, ಮಕ್ಕಳು ಸಂಸಾರದ ಗೊಡವೆ

ಬೇಕಿತ್ತಾ ನಿನಗೆ
...ದೇವರೆ
ಜಗತ್ತಿನಲ್ಲಿ ಎಲ್ಲಾ
ಬಡವರ ಸಂಕಟ, ವೇದನೆ

ನೀನೊಬ್ಬನೇ ಏಷ್ಟಂತ ನಿಭಾಯಿಸ್ತಿ
ಶ್ರೀಮಂತರ ಕಪ್ಪು ಹಣದಲ್ಲಿಯೇ ಮೆರೆಯುತ್ತಿ
ಬಡವರಿಗೆ ಹೊಟ್ಟೆ ಪಾಡು, ಹಸಿವಿನಲ್ಲಿ ನರಳಸ್ತಿ

ನಿನ್ನ ಬಳಿ ಹುದ್ದೆ ಖಾಲಿ ಇದ್ದರೆ
ತಪ್ಪದೇ ತಿಳಿಸು
ನಿರುದ್ಯೋಗಿಗಳನ್ನು ಕೆಲಸ ಕೊಟ್ಟು ಉಳಿಸು

ಮೋಸ, ವಂಚನೆ, ಭ್ರಷ್ಟಾಚಾರ ಅಳಿಸು
ಕೆಲವರಿಗೆ ಹಣ, ಅಧಿಕಾರದ ಮೇಲಷ್ಟೆ ಮನಸ್ಸು
ನಾಳೆ ಯಾರ ತಲೆ ಒಡೆಯಲಿ ಎಂಬುದೇ
ಹಲವರ ಕನಸು.....

ಯಾರವನು....? ಯಾರವನು
ನಿನ್ನ ಮನದಲ್ಲಡಗಿರುವನು
ನಿನಗೇ ಗೊತ್ತಿಲ್ಲದ ಹಾಗೆ ಸುಳಿದವನು
ಮನದ ಆಸೆಗೆ ಕನಸುಗಳನ್ನು ಕೊಟ್ಟವನು

ಕಚಗುಳಿ ಇಟ್ಟು....ಕುಚಗಳು ಒಂದಿಷ್ಟು
ಸಡಿಲಗೊಳಿಸಿದವನು
ಯಾರವನು....?
ಮುದವಾದ ದೇಹ ಸಿರಿ ಬಯಸಿದವನು

ಅವನ ಬಯಕೆ! ನೂರೆಂಟು ಹರಕೆ
ನಿನ್ನನ್ನೇ ಬಲಿಪಶುವಾಗಿ ಮಾಡುತ್ತಾನೆ ಜೋಕೆ
ಇಷ್ಟಿಷ್ಟೇ....ನಿನ್ನನ್ನು ಮುದಗೊಳಿಸುತ್ತ
ಸನಿಹ ಎಲೆದಾಡಿ, ಮೈಮನ ಹದ ಮಾಡುತ್ತಾನೆ

ನಿನಗೆ ಕನಸಿನ ಏಣಿ ಹತ್ತಿಸುತ್ತಾನೆ
ಕಟ್ಟು ಕಥೆಗಳ ನಿರೂಪಣೆಯಲ್ಲಿ ಬಂಧಿಸಿಡುತ್ತಾನೆ
ನೀನು ಕಥೆಗಳ ನಿರೂಪಣೆಯಲ್ಲಿ ಬಂಧಿಯಾಗಿ
ಕಥೆಗಳಿಂದ ಹೊರಬರದಂತೆ
ಸುತ್ತಲೂ ಜೀವಂತ ಪಾತ್ರಗಳನ್ನು ಹೆಣೆಯುತ್ತಾನೆ

ಯಾರವನು....? ಯಾರು
ನಿನ್ನಿಂದಲೇ ಸ್ಫೂರ್ತಿ ಪಡೆದವನು
ನಿನ್ನ ಮಾನ ಮುಚ್ಚಿಡಲು ಹಂಬಲಿಸಿದವನು
ಎಲ್ಲವೂ ಮುಚ್ಚಿಟ್ಟುಕೊಳ್ಳಲಾಗದೇ
ಪರಿತಪಿಸಿದವನು......!!

ಕಳೆದು ಹೋಗಿರುವೆ
ಕಾಣುವ ಕಣ್ಗಳ ಎದುರಿಗಿದ್ದರೂ
ಕಳೆದು ಹೋಗಿರುವೆ ನಾನು
ಬದುಕಿನ ಬಂಡಿಯ ಚಕ್ರದಡಿ ಸಿಲುಕಿ
ಜೀವನವೆಂಬ ದಾರಿಯಲ್ಲಿ ಕವಿದ
ಕತ್ತಲೆಯ ಗರ್ಭವನ್ನು ಸೀಳುತ್ತ
ಹೊರಟಿರುವೆ ಬೆಳಕನ್ನು ಹುಡುಕುತ್ತ

ಬೆಳಕಿನ ಶೋಧದಲ್ಲಿ ಹಲವು ಸಂಕಷ್ಟಗಳು
ಕಷ್ಟ, ನಷ್ಟಗಳ ನೋವಿನ ಸರಮಾಲೆಗಳು
ಜೊತೆಯಾಗಿಸಿ, ಸಂಸಾರದ ನೊಗವನ್ನು ಹೊತ್ತು
ನಡೆದಿರುವೆ ನಿರಂತರ
ಕಲ್ಲು-ಮುಳ್ಳೆಂಬ ದಾರಿಯಲ್ಲಿ ಸಿಗದು
ಯಾವುದಕ್ಕೂ ಸ್ಪಷ್ಟವಾದ ಒಂದೂ ಉತ್ತರ
ಸುರಿಯುತಿದೆ ಹೆಜ್ಜೆ ಹೆಜ್ಜೆಯಲ್ಲೂ ಕೆಂಪು ನೆತ್ತರ

ಯಾವುದೋ ಕನಸು, ಯಾರದೋ
ಕಲ್ಪನೆ, ಹಾಗೇ ಒಮ್ಮೊಮ್ಮೆ ಬಂದು
ಹೋಗುತವೆ ಸುಮ್ಮನೆ
ಅದಕ್ಕೆ ಸ್ಪಷ್ಟವಾದ ಚಿತ್ರಣವಿಲ್ಲ
ನಿಖರವಾಗಿ ಬಣ್ಣವಿಲ್ಲ
ಹುರುಪಿನ ಆಸೆಯಲ್ಲಿ ದಟ್ಟವಾದ
ಅನುಭವವಿಲ್ಲ, ವಾಸ್ತವಿಕ ಜೀವನದಲ್ಲಿ
ಅದೊಂದು ಒಡೆದ ಕನ್ನಡಿ
ಚಿತ್ರ-ವಿಚಿತ್ರವಾಗಿದೆ ಬದುಕಿನ ಮುನ್ನುಡಿ

ಭ್ರಮ್ಮ ಬರೆದ ವಿಧಿ ಬರಹ ಅಳಿಸಲಾಗದು
ನಮಗೆ ನಾವೇ ಬರೆದುಕೊಂಡ
ಗೋಡೆ ಬರಹ ಉಳಿಸಲಾಗದು
ಹಾಗೇ ಜೀವನದುದ್ದಕ್ಕೂ
ಬದುಕಿನ ಬಂಡಿ ಸಾಗಬೇಕು

ಕಲ್ಲು-ಮುಳ್ಳೆಂಬ ದಾರಿಯಲ್ಲಿ ಮುನ್ನಡೆಯುತ್ತ
ಕಣ್ಣಿಗೆ ಕಾಣದ ತಗ್ಗು ದಿಣ್ಣೆಯಲ್ಲಿ ಉರುಳಬೇಕು
ಇದೇ ಜೀವನ, ಇದೊಂದು
ಬದುಕೆಂದು ನಂಬಿಕೊಂಡು ಬಾಳಬೇಕು
ಶಾಶ್ವತ ಮಲಗಿಕೊಂಡ ಜಾಗದಲ್ಲೇ
ಒಂದಿಷ್ಟು ಆಳವಾಗಿ ಚಿಂತಿಸಬೇಕು

ಪುಸ್ತಕ ತತ್ವ-ಜೀವನ ಸತ್ತ್ವ
ವಿಶ್ವ ಪುಸ್ತಕ ದಿನಾಚರಣೆ
ಬರೀ ಆಚರಣೆಯಲ್ಲ
ಪುಸ್ತಕ, ಓದು ಬರಹ
ಅಳವಡಿಸಿಕೊಂಡವರ ಜೀವನ
ಕಹಿಯಲ್ಲ, ಎಂದೆಂದಿಗೂ ಅದು ಸಿಹಿಬೆಲ್ಲ

ನಿಜ ಜಿವನದಲ್ಲಿ ಪುಸ್ತಕದ ಮಹತ್ವ
ಅರಿತುಕೊಂಡು, ಪಾಲಿಸಬೇಕು ಅದರೊಳಗಿನ ತತ್ತ್ವ
ಪುಸ್ತಕದೊಳಗಡಗಿದೆ.....
ಸುಖ, ಶಾಂತಿ, ನೆಮ್ಮದಿಯ ಸತ್ತ್ವ

ಪುಸ್ತಕ ಓದಿ ದೊಡ್ಡವರಾದವರು
ಅದೇಷ್ಟೋ ಜನ....
ಪ್ರಪಂಚವೇ ನಿನ್ನನ್ನು ಬಿಟ್ಟು ಹೋದರೂ
ನಿನ್ನಲ್ಲಿರುವುದು ಪುಸ್ತಕದ ಜ್ಞಾನ
ಬೇಕಾಗಿದೆ ಪ್ರಸ್ತುತ ಸಮಾಜಕ್ಕೆ
ಪ್ರತಿ ಮನೆಯಲ್ಲೊಂದು ನೆಮ್ಮದಿಯ ತಾಣ

ವಿಶ್ವ ಪುಸ್ತಕ ದಿನ ಆಚರಿಸುವ ಮುನ್ನ
ಒಂದು ಪುಸ್ತಕದ ಜ್ಞಾನವನ್ನಾದರೂ ಇದ್ದರೆ ಚೆನ್ನ
ನಿನ್ನಲ್ಲಿರದಿದ್ದರೂ ಸರಿಯೇ, ಒಡವೆ ಚಿನ್ನ
ಪುಸ್ತಕ ಸಂಸ್ಕøತಿಯ ಆಳವನ್ನರಿಯಬೇಕು
ಪುಸ್ತಕ ಖರೀದಿಸಿ ಓದುವವನೇ
ಒಬ್ಬ ಸಮಾಜ ಸುಧಾರಕ ಕೇಳಣ್ಣ!!





ಹೆತ್ತವಳು
ಎಲ್ಲಿದ್ದವೂ ನಿನ್ನ
ಮನದಂಗಳದ ಆಸೆಗಳು
ಪದಪೂಣಿಕೆ ಕನಸುಗಳು
ಬಿಗಿಗೊಂಡ ಬಯಕೆಗಳು

ನಿನ್ನ ಹಾವಭಾವ ಬಣ್ಣ
ಸ್ವಲ್ಪ ಅದಲು-ಬದಲು
ಒಂದಿಷ್ಟು ತಾಳ್ಮೆ, ಸಹನೆ ಕೂಡ
ಹೆಚ್ಚಿಸಿಕೊಂಡವಳು

ಬಾಡಲಿಲ್ಲ ನಿನ್ನ ಆಸೆ, ಕನಸು, ಬಯಕೆಗಳು
ಬಯಕೆಯ ಬಸಿರಿನೊಳಗೆ ನೋವು ಹೆಚ್ಚಾದರೂ
ಒಮ್ಮೊಮ್ಮೆ ನರಳುವಿಕೆ, ಮಗದೊಮ್ಮೆ
ಏನೋ ಹೊಸದೊಂದು ಪಡೆದುಕೊಳ್ಳುವ
ಖುಷಿ-ಸಂಭ್ರಮದ ಸಂಚಿಕೆ

ಬಂಧನ
ಉಸಿರೇ ನೀ ಮೌನವಾಗಿರಬೇಡ
ನನ್ನ ಉಸಿರಾಟ ನಿಂತು ಹೋದಿತು
ನಿನ್ನ ಬಿಟ್ಟು ನನಗ್ಯಾರಿಲ್ಲ
ನೀನೆ ನನ್ನ ಜೀವ ಎಂದಿತು

ನಿನ್ನ ಸ್ಪರ್ಶ ಬಿಸಿ ಉಸಿರಾಟ
ದಿನವೂ ನೀನು ಬರೆದಂತೆಲ್ಲ
ನಿತ್ಯ ಸುಮಂಗಲಿಯ ಹಣೆಯ ಮೇಲೆ
ಶೋಭಿಸುವಂತೆ ಕುಂಕುಮ
ನನ್ನ ನಿನ್ನ ಬಂಧನ

ನಿನ್ನ ಕೈ ಹಿಡಿದು ನಡೆಸುವವನ
ಮನದ ಭಾವನೆಗಳು ಅದೇಷ್ಟು ಛಂದ
ಅವನ ಗೆಳೆಯ ನೀನಾಗಿರುವುದಕ್ಕೆ
ನಮ್ಮಿಬ್ಬರಲ್ಲಿ ಬಂಧ!

ನಮ್ಮಿಬ್ಬರನ್ನು ಯಾರೂ....ಎಂದಿಗೂ
ದೂರ ಮಾಡರು...ಒಂದು ವೇಳೆ
ದೂರ ಮಾಡಲು ಹೊರಟವನ ಬಾಳಿನಲ್ಲಿ
ಇರುವುದಿಲ್ಲ? ಆಸೆ ಕನಸುಗಳ ಸೂರು

ವಿಷ ಸರ್ಪದ ಮದ್ದು
ನಾನೊಂದು ಮಾತೊಂದು ಹೇಳುವೆ ಗೆಳತಿ
ದಯವಿಟ್ಟು ಕಿವಿಗೊಟ್ಟು ಕೇಳು...
ನಾ ಕೊಟ್ಟಿರುವ ಪ್ರೇಮ ಪತ್ರಕ್ಕೆ
ನೀ ಬರೆದ ಉತ್ತರ ಏನಿರಬಹುದೆಂದು
ಕುತೂಹಲದಿಂದ ಬಿಚ್ಚಿ ನೋಡಿದೆ
ಮನವ ಬಿಚ್ಚಿ ಓದಿದೆ

ಬರೆದದ್ದು ಬರಿಮೈಗೆ
ಬರೆ ಎಳೆದ ಹಾಗಿತ್ತು
ನನ್ನ ಮನದೊಳಗಿಂದ ಸದ್ದಿಲ್ಲದೆ
ನಿನ್ನ ಪ್ರೀತಿ ಜಾರಿ ಬಿತ್ತು.....

ನತದೃಷ್ಟ ಹುಡುಗನ
ಪ್ರೇಮ ಪಾಶಕ್ಕೆ ನೀ
ಸಿಲುಕಿದ್ದು ಗೊತ್ತಾಯಿತು?!

ಆಗದಿರು ಗೆಳತಿ ಇನ್ಯಾರಿಗೂ
ನನ್ನ ಬಾಳಿಗಿಟ್ಟ ಹಾಗೆ
ವಿಷ ಸರ್ಪದ ಮದ್ದು!!










ಕಥೆಗಾರ ಶ್ರಿಕಾಂತ ಪಾಟೀಲ
(ದಿ.ಶ್ರೀಕಾಂತ ಪಾಟಿಲ್ ಬಟಗೇರಾ, ಕೃಷಿ ಅಧಿಕಾರಿಗಳು ಇವರ ಒಂದು ಸವಿ ನೆನಪಿಗಾಗಿ)

ನಿವ್ಯಾಕಾದ್ರೂ ನಮ್ಮಿಂದ ದೂರ ಸರದ್ರಿ
ಸಾವಿಗೊಂದಿಷ್ಟು ಕರುಣೆ ಇರಬಾರದೇನ್ರೀ
ತಮ್ಮಾ ಬಾ ಇಲ್ಲಿ...ಈಗೇನ್ ಬರೀತಾ ಇದ್ದಿ?
ಇಷ್ಟು ನೀವು ಕೇಳಿದ್ರೆ ಸಾಕಿತ್ರಿ
ಸೊಮಾರಿ ಸಾಹಿತಿಗೂ ಏನಾದರೂ
ಬರೆಯಲು ಹಚ್ಚುತ್ತಿದ್ರಿ

ನೀವು ಬರೆದದ್ದು ಹೆಚ್ಚು ಕಥಾ ಸಾಹಿತ್ಯ
ಬಟಗೇರಿ ಕೆಂಪು ಮಣ್ಣಿನ ವಾಸನೆ
ಗ್ರಾಮ್ಯ ಭಾಷಾ ಸೊಗಡು
ನಿಮ್ಮ ಕಥೆಗಳಲ್ಲಿ ಇನ್ನೂ ಜೀವಂತ
ಬೆಂಕಿ ಮರೆಯ ತಂಪು ಕಥಾ ಸಂಕಲನದಲ್ಲಿ
ಸಾಮಾನ್ಯ ವರ್ಗ ಕುಟುಂಬದವರ ಜೀವನದ ಸುತ್ತ
ಹೆಣೆದಿರುವ ಕಥಾ ಶೈಲಿ, ನಿರೂಪಣೆ ಅದ್ಭುತ!

ಶ್ರೀಕಾಂತ ಪಾಟೀಲರೆಂದರೆ
ಎಂಥವರನ್ನೂ ಕೂಡಾ ಬೆರಗುಗೊಳಿಸುವಂಥ
ನೈಜ ಚಿತ್ರಣಗಳನ್ನು ತೆರೆದಿಡುವ ಸ್ವಂತ-
ವಾಸ್ತವ ಬದುಕಿನ ಕಥೆಗಳು ಬರೆಯುವ ಕಲೆ ಕರಗತ
ಮಾಡಿಕೊಂಡಿದ್ದಿರಿ ನೀವು, ಸಾಹಿತ್ಯ ಲೋಕದ
ಹೈದ್ರಾಬಾದ ಕರ್ನಾಟಕಕ್ಕೆ ನೀವೇ ಶ್ರೀಮಂತ

ನೀವು ಕೃಷಿ ಅಧಿಕಾರಿಯಾಗಿ ವೃತ್ತಿಯಲ್ಲಿದ್ರಿ
ಪ್ರವೃತ್ತಿಯಲ್ಲಿ ಸಾಹಿತ್ಯ ಚಿಂತಕರು,ಕಥೆಗಾರರಾಗಿದ್ರಿ
ಯುವ ಸಾಹಿತಿಗಳನ್ನು ಗುರುತಿಸಿ ಬೆನ್ನು ತಟ್ಟಿದ್ದಿರಿ
ಯುವ ಕವಿಗಳಿಗೆ ಮಾರ್ಗದರ್ಶಿಯಾಗಿ ಪ್ರೋತ್ಸಾಹಿಸಿದ್ರಿ
ಮುನ್ನುಡಿ ಬೆನ್ನುಡಿ ಬರೆದು ಉತ್ತೇಜಿಸಿದ್ರಿ
ಸೂಕ್ತ ವೇದಿಕೆ ಕೊಟ್ಟು ನಮ್ಮನೀವು ಬೆಳೆಸಿದ್ರಿ
ಆದರೆ...! ವಿಧಿ ಕರೆದೊಯ್ದೆಡೆ ಯಾಕ್ಷ್ಟು ಬೇಗ್ ಹೋದ್ರಿ?

ಬರಹಗಾರ ಸತ್ತಾಗ? ಅವನ ಬರಹ ಜೀವಂತ
ಓದುತ್ತೇವೆ ಇಂದಿಗೂ ನಿಮ್ಮ ಕಥೆಗಳು ನಿತ್ಯ
ಕಥೆಗಾರ ಕಥೆಯಾದದ್ದು ಎಂಥಾ ದುರಂತ
ನೀವು ನಮ್ಮೊಂದಿಗಿಲ್ಲವಾದರೂ...ನಿಮ್ಮ ಕನಸುಗಳು
ನೆನಪುಗಳು, ನಮ್ಮೊಂದಿಗಿರುತ್ತವೆ; ನಾವಿರುವತನಕ ಶಾಶ್ವತ

ರೈತನೇ ಆಳರಸರ ದೊರೆ
ರೈತ ನೀ ಹೊಲವನ್ನು ಉತ್ತಿ ಬಿತ್ತಿ ಬೆಳೆದು
ನೇಗಿಲ ಕುಂಟೆ ಹೊಡೆದು
ಹುಲುಸಾಗಿ ಬೆಳೆಯುವ ಬೆಳೆಗೆ
ಕಾಯಬೇಕಣ್ಣ ದೇವರ ಕೃಪೆಯ ಮಳೆಗೆ

ರೈತನೆಂದರೆ....?
ದೇಶದ ಎಲ್ಲಾ ಜನತೆಯ ತೊಂದರೆ
ನೀಗಿಸುತ್ತ, ಆಗುತ್ತಾನೆ ಇತರರ ಕಷ್ಟಕಾಸರೆ
ರೈತನೇ ನಮ್ಮ ದೇಶದ ಆಳರಸರ ದೊರೆ

ರೈತನಿಲ್ಲದೆ ಜೀವನ ಬಂಡಿ ಮುಂದೆ ಸಾಗದು
ಅನ್ನದಾತನಿವನು
ಕಷ್ಟಪಟ್ಟು ದುಡಿದರೆ ಮಾತ್ರ ದೇಶ ಉಳಿಯುವುದು
ರೈತ ದುಡಿಯದಿದ್ದರೆ? ಹಸಿವಿನ ಹಾಹಾಕಾರ
ಪ್ರತಿಯೊಬ್ಬರ ಜೀವನದಲ್ಲೂ ಎದುರಾಗುವುದು

ಭಾರತ ದೇಶದ ಇತಿಹಾಸದಲ್ಲಿ
ರೈತನಿಗಿಟ್ಟ ಹೆಸರೇ ಅನ್ನದಾತ
ಅನ್ನದಾತನ ಕೈ ತುತ್ತಿನಿಂದಲೇ
ಹೊಟ್ಟೆ ತುಂಬಿಸಿಕೊಳ್ಳುವ ನಾವು
ರೈತನನ್ನು ಜೀತದಾಳನ್ನಾಗಿ ದುಡಿಸಿಕೊಳ್ಳುವುದು
ಅದೇಷ್ಟು ಸೂಕ್ತ...?

ಸರ್ಕಾರದ ಸೂತ್ರಗಳಲ್ಲಿ
ಬಂಧಿಯಾಗಿರುವನು ರೈತ
ಸೂತ್ರದ ಬೊಂಬೆಯಾಗಿ, ದುಡಿಯುವನು
ಅದು ನಿಮಗೆ ಗೊತ್ತ?

ತಪ್ಪಲಿಲ್ಲ ರೈತನ ಬವಣೆ
ಅವನು ಸತ್ತಾಗ ಯಾರು ಹೊಣೆ
ರೈತನ ಸಾವಿಗಿಲ್ಲ ಕಿಮ್ಮತ್ತು ನಾಲ್ಕಾಣೆ!
ರೈತನ ಕಷ್ಟ ಸುಖದಲ್ಲಿ ಭಾಗಿಯಾದರಷ್ಟೇ
ನಮಗೆಲ್ಲ ಉಳಿವುಂಟು......
ಇಲ್ಲವಾದರೆ, ಅಳಿವಿನಂಚಿನಲ್ಲಿ
ನಮ್ಮ-ನಿಮ್ಮೆಲ್ಲರ ಬದುಕುಂಟು

ಕಳೆದು ಹೋದವರು
ಕಳೆದು ಹೋದವರು
ಹಿಂತಿರುಗಿ ಬರಲಿಲ್ಲ
ಮರೆಯದ ಅವರ ನೆನಪುಗಳು
ಬದುಕಲು ಬಿಡಲಿಲ್ಲ

ಪ್ರಸವ ಕಾಲದಲ್ಲಿ ಹುಟ್ಟಿ
ಕಳೆದು ಹೋದ ಕವಿತೆಯ ಹಾಗೆ
ಅವರ ಅಗಲಿಕೆ
ಹೇಗೆ ಸಹಿಸಿಕೊಳ್ಳಲಿ ಚಡಪಡಿಕೆ

ಪ್ರತಿದಿನ ಪ್ರತಿಕ್ಷಣ
ಕಣ್ಮುಂದೆ ಇದ್ದವರು
ಕಣ್ಮರೆಯಾಗಿ ಹೋದರು
ಅವರ ಕನಸು, ಕಲ್ಪನೆ, ಸಾಧನೆ
ಹೆಗಲೇರಿಸಿ ಮನಸ್ಸಲ್ಲೆ ಉಳಿದರು

ಹುಟ್ಟು-ಸಾವಿಗೂ ಅಂತರ ಜೀವನ
ಉಸಿರಾಟ ಒಂದೇ ನಮಗೆ ಸಂಜೀವನ
ಇರುವತನಕವೇ ಸಾಧಿಸಬೇಕು
ಸತ್ತ ಬಳಿಕ? ಪರರ ಮೇಲೇಕೆ
ಹೋರಿಸಬೇಕು
ಬದುಕಿದ್ದು ಸಾಧಿಸಲಾಗದವನು
ಸತ್ತ ಶವಗಿಂತ ಕಡೆ! ಎಂಬುದು ತಿಳಿದಿರಬೇಕು




ಚಿತ್ತ ಚಂಚಲೆ
ತುಂಬು ಹರೆಯದ ಚೆಲುವೆ
ಯಾಕಿಷ್ಟು ಅವಸರ
ತಡೆಯಲಾಗದಷ್ಟು ಕಾಮಾತುರ
ಕಂಡು ಬೆರಗಾದೆ ನಿನ್ನ ಅಂತ:ಪುರ

ಬಟ್ಟೆಯ ಹಂಗಿಲ್ಲದೆ
ನೀನಾದೆಯಾ ಬೆತ್ತಲೆ
ನಾನು ಕೂಡ ನಿನ್ನಂತೆಯೆ
ಬಾ ಚಿತ್ತ ಚಂಚಲೆ

ಬಯಲು ಆಲಯದೊಳಗೆ
ಯಾರೂ ಇಲ್ಲ, ಅಪ್ಪಿಕೋ ಚಂದ್ರಿಕೆ
ಎಲ್ಲಾ ಕಳಚಿದ ಮೇಲೆ,ಯಾತರ ನಾಚಿಕೆ

ಸೂರ್ಯನ ಬಿಸಿಲು ತಾಪ
ಮಳೆಯಲ್ಲಿ ಕಳೆದುಕೊ
ಏನಿದ್ದರೂ ನಿನ್ನ ಕೋಪ
ನನ್ನೀ ಪ್ರೀತಿಯ ಸಿಂಚನದಲ್ಲಿ
ಉಳಿಸಿಕೊ....ತಣಿಸಿಕೋ

ನನ್ನೆದೆಯ ಗೂಡಲ್ಲಿ ಬರೆದಿರುವೆ
ನಿನ್ನದೇ ಹೆಸರು ಒಲವೆ
ಕಣ್ಣಿಗೆ ಕಾಣದ ಮಿಥ್ಯ
ನಿನ್ನಾ ನೆರಳಿನಷ್ಟೇ ಸತ್ಯ!

ಹರೆಯದಲ್ಲಿ ಬಯಸಿದ್ದೆಲ್ಲ ಸಿಗದು
ಸಿಕ್ಕಷ್ಟು ಬಾಚಿಕೊಂಡರೆ ಸಾಕು
ಸ್ಪರ್ಶ, ಅಲಿಂಗನ; ಸ್ಖಲನದ ಬಳಿಕ
ಸಾಕ್ಷಿಯಾಗಿರಲಿ ಬಸಿರು
ಅದೇ ಜೀವನದುದ್ದಕ್ಕೂ
ಹೊಸ ಬದುಕಿಗೊಂದು ಉಸಿರು


ಕಸಬರಿಗೆ ಬೇಕಾಗಿದೆ
ಎಲ್ಲಿಯವರೆಗೆ ಬಿಟ್ಟು
ಕೊಡುವುದಿಲ್ಲವೋ ಮೌನ
ತಪ್ಪಿದ್ದಲ್ಲ ಅನ್ಯಾಯ, ಶೊಷಣೆ
ಅದಕ್ಕಾಗಿ ಬೇಕಾಗಿದೆ
ಪ್ರತಿಭಟನೆ ಘೊಷಣೆ!

ಈಗ ಇಲ್ಲಿ ಯಾರೂ ಮುಗ್ಧರಲ್ಲ
ಮುಗ್ಧರಾಗಿ ಉಳಿದವರಿಗೆ
ಬದುಕುವ ದಾರಿಯೇ ಇಲ್ಲ
ಸಿಡಿದೇಳಬೇಕು ಎಲ್ಲರೂ
ಸ್ವಾರ್ಥ ಬಿಟ್ಕೊಟ್ಟು
ನಮ್ಮಿ ಕೆಚ್ಚೆದೆಯೊಳಗಿರಬೇಕು ಒಗ್ಗಟ್ಟು
ಬಾ...ದಿಟ್ಟ, ದೃಢವಾದ ಹೆಜ್ಜೆಯನ್ನಿಟ್ಟು

ಪ್ರಜ್ಞಾವಂತರ ನಾಡಿನಲ್ಲಿ
ಬದುಕು ಹೋರಾಟ ಸ್ವಾತಂತ್ರ್ಯ
ಯಾರದೋ ದಬ್ಬಾಳಿಕೆಯಲ್ಲಿ ನಲುಗುತ್ತಿವೆ
ರಾಜಕೀಯದ ಕುತಂತ್ರಕ್ಕೆ ಸಿಲುಕಿವೆ
ಅದಕ್ಕಾಗಿಯೇ ಇಲ್ಲಿ ನಿತ್ಯವೂ
ಪ್ರತಿಭಾವಂತರ ಕೊಲೆಗಳು ನಡೆಯುತ್ತಿವೆ
ಮುಖವಾಡ ಧರಿಸಿದವರ ಸಂಗದಲ್ಲಿ ಸಾಯುತಿವೆ

ಜನಗಳೇ ಕೇಳಿಸದೆ ನಿಮಗೆ
ಅನ್ಯಾಯ,ಶೋಷಣೆಗೊಳಗಾದವರ ವೇದನೆ
ಮುಖವಾಡಗಳ ಕಣ್ಣಲ್ಲೇ ಕಾಣುತಿವೆ
ಅದೇಷ್ಟೋ ಪ್ರತಿಭಾವಂತರ ಶವಗಳು!

ಪೊಳ್ಳು ಭರವಸೆಗಳಿಗೆ
ಸುಳ್ಳು ವೇದಿಕೆಗಳಿಗೆ
ಮೆರವಣಿಗೆ ಆಗದಿರಿ ಜೋಕೆ!
ದೂರ ಸರಿಯದಿರಲಿ
ಹೋರಾಟ, ಕೂಗೂ, ಪ್ರತಭಟನೆಯ ಒಗ್ಗಟ್ಟು
ಅನ್ಯಾಯದ ಕಸವನ್ನು ಗುಡಿಸಲು
ನ್ಯಾಯದ ಕಸಬರಿಗೆಯೊಂದು ಬೇಕಾಗಿದೆ

ಗೆಳತಿ
ನಿನ್ನ ಮನದೊಳಗೇನೋ
ಒಂದು ಆಸೆ! ಪುಟಿಯುತಿದೆ
ಬರೆದು ಬಿಡಲೆ ಗೆಳತಿ
ನಿನ್ನಿ ದೃಷ್ಠಿಯಲ್ಲಿ ಬೆರೆತುಕೊಂಡಿರುವ
ಪ್ರೇಮ ಗೀತೆ, ಭಾಷೆ

ಮಾತಿಲ್ಲದ ಮೌನದಲ್ಲಿ
ನಿಂತ ನಿನ್ನ ಭಂಗಿಯನ್ನು
ಕಂಡು, ಚಿಗುರೆಲೆಗಳೊಂದಿಗೆ
ಮೈ ತುಂಬಿಕೊಂಡು ನಿಂತ
ಹೂ ಗಿಡವು ಕೂಡ? ನಾಚಿಕೊಂಡಿದೆ

ನಿನ್ನ ಹಾಗೆ...ಹೊಸ ಹುರುಪು
ಹೊತ್ತು ತಂದಿದೆ
ಹೂವಿಗಿಂತ ಚೆಲವು ನಿನ್ನದು
ಹೂ ಯಾಕೆ ಬೇಕು? ನಿನಗೆ
ಒಂದೂ ತಿಳಿಯದು

ನೆನಪಿರಲಿ; ತುಂಬು ಹರೆಯದವಳೆ
ಹೋವೊಂದು ಬಾಡಿ ಹೊದರೂ
ಕವಿತೆಯೊಂದೇ ನಿನಗೆ ನೆರಳು ಎಂಬುದು
ನಿನ್ನಾ ಯೌವ್ವನ
ಕರಗಿ ಹೋಗುವ ಮುನ್ನ

ಅಪ್ಪಿಕೋ ಒಮ್ಮೆ ಚಿನ್ನಾ! ಎಂದಿತೆ
ಹೂ-ಗಿಡವೆಂಬ ರನ್ನ
ಹಾಕಿಬಿಟ್ಟಿತ್ತಲ್ಲ ಸೌಂದರ್ಯದ ಮೇಲೆ ಕನ್ನ
ಅಲ್ಲೆ ಎಲ್ಲೋ ಕೋಗಿಲೆಯು ಹಾಡುತಿದೆ
ಅದರ ಮಧುರ ಕಂಠದಿಂದ

ಮೋಡದ ಮರೆಯಿಂದ ಹನಿ...ಹನಿ
ಮಳೆಯು ಜಿನುಗಿತಿದೆ ತುಂತುರು
ಮಳೆಯಲ್ಲಿ ನೆನೆಯುತ
ನವಿಲು ಕುಣಿಯುತಿದೆ!
ಅದೇಷ್ಟು ಚಂದ...ಛಂದ!!

ಇಬ್ಬನಿಯು ಮೂಡುವಾಗ
ಮೌನ ಮುರಿದು ಬಾರೇ ಚೆಲುವೆ
ಅಂದಗಾತಿ ನೀನೆ...ಚೆಂದಗಾತಿ ಹೆಣ್ಣೆ
ಚಳಿಗೆ ತಾಳಲಾರೆ
ನಿನ್ನ ಸ್ಪರ್ಶ ಇಲ್ಲದೆ

ನಿನ್ನ ಮನದ ಆಸೆಯೊಳಗೆ
ಅವಿತು ಕುಳಿತ ಕನಸಿಗೆ
ರೆಕ್ಕೆ-ಪುಕ್ಕ ಕೊಡಿಸುವೆ
ಜೊತೆಗೂಡಿಕೊಂಡು ಹಾರುವ ಬಾ
ನನ್ನ ಒಲವೆ...ಚಂದಿರನ ಮಗಳೆ?
ನೀ ಬರುವ ಹಾದಿಯಲ್ಲಿ ಚೆಲ್ಲಿರುವೆ
ಹೂ ಹಾಸಿಗೆ...ಹೂವಿನಾಸೆಗೆ!
ಹಾಳೆಗಳು-ನಾಳೆಗಳು
ಎಲ್ಲಾ ಭರವಸೆಗಳು
ಕಳೆದು ಹೋದ ಮೇಲೆ
ಉಳಿದಿದ್ದು ಬರೀ ನೆನಪುಗಳು

ಎಲ್ಲಾ ಕನಸುಗಳು
ಕರಗಿ ಹೋದ ಮೇಲೆ
ಉಳಿದಿದ್ದು ಬರೀ ಕನವರಿಕೆಗಳು

ಎಲ್ಲಾ ಆಸೆಗಳು
ಹುಸಿಯಾದ ಮೇಲೆ
ಉಳಿದಿದ್ದು ಬರೀ ನಿರಾಸೆಗಳು

ಎಲ್ಲಾ ಬಯಕೆಗಳು
ಬಯಲಾದ ಮೇಲೆ
ಉಳಿದಿದ್ದು ಬರೀ ಬೆತ್ತಲೆ ಚಿತ್ರಗಳು

ಎಲ್ಲಾ ಭಾವ-ಬಂಧನಗಳು
ಒಂದಾದ ಮೇಲೆ
ಉಳಿದಿದ್ದು ಬರೀ ಕವಿತೆಗಳು

ಎಲ್ಲಾ ಕವಿತೆಗಳು
ಬರೆದಾದ ಮೇಲೆ
ಉಳಿದಿದ್ದು ಬರೀ
ಖಾಲಿ ಹಾಳೆಗಳು-ನಾಳೆಗಳು




ಬಹುಮಾನ
ಎಷ್ಟೋ ದಿನಗಳು ಕಳೆದು ಹೋದವು ನಿನ್ನ ನೆನಪುಗಳಿಂದಲೇ
ಇಂದಿಗೂ ಸಾಗುತಿದೆ ಬದುಕು ಗೆಳತಿ ನಿನ್ನಿಂದಲೇ

ನಿನ್ನ ಮರೆತು ಬದುಕುವುದೆಂದರೆ ಅಸಾಧ್ಯ! ಸಧ್ಯ
ನೀನು ಸಿಕ್ಕರೆ ಸಾಕು ಒಮ್ಮೆ, ಅರ್ಪಿಸುವೆ ಸಾವಿರ ಪದ್ಯ

ನೀನು ನನ್ನ ಬಿಟ್ಟು ಹೋದ ದಿನಗಳಿಂದ ಗೀಚಿದ್ದೇನೆ
ಬರೀ ಕಪ್ಪು ಗೇರೆಗಳಲ್ಲಿ ನಿನ್ನ ರೂಪ ಹಿಡಿದಿಟ್ಟಿದ್ದೇನೆ

ಗೆಳತಿ ನಿನ್ನ ಎಲ್ಲಾ ನೆನಪುಗಳು ಹಾಗೇ ಬಂಧಿಸಿಟ್ಟಿದ್ದೇನೆ
ಬಿಡುಗಡೆಗಾಗಿ ನೀ ಬರುವುದನ್ನೇ ಕಾಯುತ್ತಿದ್ದೇನೆ

ನನಗಾಗಿ ನೀನು ನಿನಗಾಗಿ ನಾನು ಇರುವಾಗಲೇ
ನಿನ್ನದೆಲ್ಲವನ್ನು ನಿನ್ನೊಪ್ಪಿಗೆಯಿಂದಲೇ ಪಡೆದುಕೊಂಡಿದ್ದೇನೆ

ನಿನ್ನೆದೆಯಲ್ಲಿ ಒಂದು ಸ್ಥಾನ ಪಡೆಯುವಾಗಲೇ ಕಳಚಿಕೊಂಡಿದ್ದೇನೆ
ಗೆಳತಿ ನಿನ್ನ ಮನಸ್ಸೊಂದನ್ನು ಹಿಡಿದಿಡಲು ವಿಲಿವಿಲಿ ಒದ್ದಾಡಿದ್ದೇನೆ

ನೀನು ನನ್ನಿಂದ ದೂರವಿದ್ದಷ್ಟು ಪ್ರೀತಿ ಹೆಚ್ಚಾಗಿದೆ
ಗೆಳತಿ ನೀನು ಸಿಗದೆ ಇರುವಾಗ ಮನಸ್ಸು ಹುಚ್ಚಾಗಿದೆ

ನಿನಗಾಗಿ ಏನೇನೋ ಬರೆದು ಪೆಚ್ಚಾಗಿದ್ದೇನೆ ಗೆಳತಿ
ಬದುಕಿಗೆ ನೀನು ಕೊಟ್ಟ ಬಹುಮಾನ ಇದೇನಾ.....ಇದೇನಾ?

ಜೀವನ
ಜೀವನ
ಸಂಬಂಧಗಳ ಉಗಮಕ್ಕೆ
ಮೂಲ ಕಾರಣ
ಅಳಿವು-ಉಳಿವಿಗೆ
ಒಂದು ಸಣ್ಣ ರೋಧನ

ನಾನು-ನನ್ನದು
ನನ್ನವರೆಂಬುದು
ಸ್ವಾರ್ಥ ಸಮಯದಲ್ಲಿ
ಹುಟ್ಟಿರಬಹುದು

ಹುಟ್ಟು-ಸಾವಿಗೂ
ಅಂತರ ಜೀವನ
ಸೃಷ್ಟಿಕರ್ತನ ಕೈಚಳಕಕ್ಕೆ
ಕೊಡಬೇಕು ನಾವು ಬಹುಮಾನ

ಜೀವನವೆಂಬ ಪರದೆಯ ಮೇಲೆ
ಬದುಕಿನ ಆಳ-ಅರಿವು
ಚಿತ್ರಿಸಬೇಕು ನಾವು;ಅದುವೆ
ಸೋಲು ಗೆಲುವಿನ ಅನಾವರಣ

ಸಿಕ್ಕ ಸಂತಸ
ನೋವು ನಲಿವಿನ
ಜೀವ-ಜನ್ಮದ ಗಾಯನ
ಕೋಗಿಲೆಯೊಂದು ಹಾಡಿದರೆ
ಯಾಕೆ? ನಮ್ಮೊಳಗೊಬ್ಬ ಅನುಮಾನ




ಯಾವುದೇ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಕೆಚ್ಚೆದೆಯೊಂದಿಗೆ ಹುಚ್ಚು ಮನಸ್ಸು ಬೇಕು. ತೀವ್ರ ಆಸಕ್ತಿ ಇದ್ದರೆ ಮಾತ್ರ ತಾವು ಹಿಡಿದ ಕೆಲಸದಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ. ವಿ.ಎಚ್.ವೀರಣ್ಣ ಮಂಠಾಳಕರ್ ಅವರು ಸಾಹಿತ್ಯ ರಚನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಹೈದ್ರಾಬಾದ ಕರ್ನಾಟಕ ಭಾಗದ ಪ್ರತಿಭಾವಂತ ಯುವ ಬರಹಗಾರರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. “ನಿನ್ನ (ವಾ)ರಗೆಯವರು ಹಣ ಗಳಿಸಿ ಮನಸ್ಯಾ ಆಗ್ಯಾರ, ನೀನು ಮಾತ್ರ ಉಪಯೋಗಕ್ಕೆ ಬಾರದ ಬರೆಯುವ ಹುಚ್ಚು ಹತ್ತಿಸಿಕೊಂಡಿದ್ದೀಯಾಎಂದು ತಮ್ಮ ಬಗ್ಗೆ ಕೆಲವರು ಆಡಿದ ಕಟು ಮಾತುಗಳನ್ನು ಲೆಕ್ಕಿಸದೆ ಲೆಕ್ಕಣಿಕೆಗೆ ಕೆಲಸ ಕೊಡುತ್ತಲೇ ಬಂದಿದ್ದಾರೆ. ಬರೆಯುವುದರಲ್ಲಿಯೇ ಸಂತೃಪ್ತಿ ಕಂಡಿದ್ದಾರೆ.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಇವರ ಸ್ವಗ್ರಾಮ. ವೈಜಿನಾಥ ಹುವಪ್ನೋರ್ ಮತ್ತು ಶರಣಮ್ಮ ಅವರ ಎರಡನೆಯ ಮಗನಾಗಿ ಹುಟ್ಟಿದ ಇವರ ವಯಸ್ಸು ಈಗ 33 ವರ್ಷ. ಹೈಸ್ಕೂಲ್ವರೆಗೆ ಸ್ವಗ್ರಾಮದಲ್ಲಿಯೇ ಓದಿದ್ದಾರೆ. ಪದವಿ ಶಿಕ್ಷಣ ಬೀದರನಲ್ಲಿ ಪಡೆದುಕೊಂಡಿದ್ದಾರೆ. ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದ ಕಾರಣ ಶಾಲೆ ಕಲಿಯುವಾಗ ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ತಾವು ಅನುಭವಿಸಿದ ಕಷ್ಟ, ಸಹಿಸಿದ ಅನ್ಯಾವನ್ನು ಕಥೆ, ಕವನದ ವಸ್ತುವನ್ನಾಗಿಸಿ ವಿದ್ಯಾರ್ಥಿ ದೆಸೆಯಿಂದಲೇ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಭಾವಾಂತರಂಗ’ ‘ಹನಿಜೇನು’ ‘ಸುಳಿಗಳುಇವರ ಪ್ರಕಟಿತ ಕವನ ಸಂಕಲನಗಳಾಗಿವೆ. ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಮಾಡಿ ಮೊದಲು ಮಿನಿಕವಿತೆಗಳ ಸಂಕಲನ ಪ್ರಕಟಿಸಿದಾಗ, ಮುಂದೆ ಮತ್ತೆ ಇಂಥ ಕಾರ್ಯಕ್ಕೆ ಇವರು ಕೈ ಹಾಕುವುದಿಲ್ಲ ಎಂದೇ ಅನಿಸಿತ್ತು. ಆದರೆ ಅಲ್ಲಿ ಇಲ್ಲಿ ಅಲೆದಾಡಿ ಸಿಕ್ಕಂತಹ ಕೆಲಸ ಮಾಡುತ್ತ ದೊರೆತ ಹಣದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಇವರ ಕವಿತೆಗಳು ಮತ್ತು ಲೇಖನಗಳು ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆ ಮತ್ತು ಮಾಸ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಹಲವಾರು ಕಥೆಗಳನ್ನು ಸಹ ಬರೆದಿದ್ದಾರೆ. ‘ಬದುಕಿನ ಬೆನ್ನೇರಿಎಂಬ ಕಥೆ ಆಕಾಶವಾಣಿ ಗುಲ್ಬರ್ಗಾದಿಂದ ಪ್ರಸಾರ ಹಾಗೂ ಮರು ಪ್ರಸಾರಗೊಂಡಿದೆ.
ಸಂಕಲ್ಪಎಂಬ ಸಾಹಿತ್ಯಕ್ಕೆ ಸಂಬಂಧಿಸಿದ ಮಾಸ ಪತ್ರಿಕೆಯನ್ನು ಸಹ ಕೆಲಕಾಲ ನಡೆಸಿದ್ದಾರೆ. ಈಗಲೂ ಸಾಹಿತ್ಯ ಉಳ್ಳವರ ಸೊತ್ತು ಆಗಿರುವುದರಿಂದ ಅನೇಕ ಬರಹಗಾರರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ತಾಲ್ಲೂಕು ಉದಯೋನ್ಮುಖ ಯುವ ಬರಹಗಾರರ ಬಳಗದ ಮತ್ತು ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಬರಹಗಾರರನ್ನು ಸಂಘಟಿಸಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
ವಿವಿಧೆಡೆ ನಡೆದ ಕಥಾ ಕಮ್ಮಟ ಮತ್ತು ಕಾವ್ಯ ಕಮ್ಮಟಗಳಲ್ಲಿ ಹಾಗೂ ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಮೊದಲನೆಯ ಮಿನಿಕವಿತೆಗಳ ಸಂಕಲನಭಾವಾಂತರಂಗದಲ್ಲಿ ಅಪ್ಪಟ ಪ್ರೇಮಿಯಂತೆ ಭಾಸವಾಗುತ್ತಾರೆ. ಆದರೆಗಾಂಧಿ ಆಗ್ಬೇಕಂದುಕೊಂಡಾಗಕವನ ಸಂಕಲನದಲ್ಲಿ ಪ್ರೇಮಿಯ ಜೊತೆಗೆ ವಿರಹಿಯಾಗಿಯೂ ಕಾಣಿಸುತ್ತಾರೆ. ‘ಗಾಂಧಿ ಆಗ್ಬೇಕಂದುಕೊಂಡಾಗಸಂಕಲನಕ್ಕೆ ಸಂಬಂಧಿಸಿದ ದಟ್ಟ ಅನುಭವವನ್ನು ಕಟ್ಟಿ ಕೊಡುವ ಹಾಗೂ ನೈತಿಕ ಎಚ್ಚರ ಮೂಡಿಸುವ ಕವಿತೆಗಳನ್ನು ಸಹ ಸಂಕಲನ ಒಳಗೊಂಡಿದೆ. ಪರಿಪಕ್ವಗೊಂಡ ಅನುಭವದ ಮೂಸೆಯಿಂದ ಕೃತಿ ಮೂಡಿ ಬಂದಿದೆ.

ದಿ: 7-7-2009                         -ಮಾಣಿಕ ಭುರೆ, ಪತ್ರಕರ್ತರು,ಬಸವಕಲ್ಯಾಣ